ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಮರುಜಾರಿ ಚಿಂತನೆಗೆ ಜನರ ಮೆಚ್ಚುಗೆ
ಬೆಂಗಳೂರು, ಅಕ್ಟೋಬರ್ 8: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 'ಯಶಸ್ವಿನಿ ಯೋಜನೆ' ಮರು ಜಾರಿಗೆ ತರಲು ಚಿಂತನೆ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗಿದ್ದು, 'ದಯವಿಟ್ಟು ಜಾರಿಗೊಳಿಸಿ' ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಕೂ'ವಿನಲ್ಲಿ #ಯಶಸ್ವಿನಿಯೋಜನೆ ಹ್ಯಾಷ್ ಟ್ಯಾಗ್ ಅಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅನೇಕರು, ರಾಜ್ಯದಲ್ಲಿನ ಅನೇಕ ಜನರಿಗೆ ಯಶಸ್ವಿನಿ ಯೋಜನೆ ಅಗತ್ಯವಿದೆ. ಆದಷ್ಟು ಬೇಗ ಯೋಜನೆಯನ್ನು ಮರು ಜಾರಿಗೊಳಿಸಿ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.
"ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಅವಧಿಯಲ್ಲಿ ಮಹತ್ವಾಕಾಂಕ್ಷಿ ಯೋಜನೆ "ಯಶಸ್ವಿನಿ ಯೋಜನೆ' ಜಾರಿಗೆ ಬಂದಿತ್ತು. ಇದರಲ್ಲಿ ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಸಹಕಾರಿ ಸಂಘಗಳಲ್ಲಿ ನೋಂದಾಯಿತರಾದವರಿಗೆ ಇದರ ವಿಶೇಷ ಫಲಾನುಭವ ಸಿಗುತ್ತಿತ್ತು. ಕುಟುಂಬದ ಒಬ್ಬ ಸದಸ್ಯ ನೋಂದಾಯಿತರಾಗಿದ್ದರೆ ಇಡೀ ಕುಟುಂಬಕ್ಕೆ ಸವಲತ್ತು ಸಿಗುತ್ತಿತ್ತು. ಈ ಯೋಜನೆ ತುಂಬಾ ಯಶಸ್ವಿ ಆದ ಕಾರಣ ಇದನ್ನು ಪುನರಾರಂಭಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಮಣಿದಿದೆ. ಆದಷ್ಟು ಬೇಗ ಇದು ಪುನರಾರಂಭವಾಗಲಿ,'' ಎಂದು ಕಾರ್ತಿಕ್ ರಾವ್ ಒತ್ತಾಯಿಸಿದ್ದಾರೆ.

"ಯಶಸ್ವಿನಿ ಗ್ರಾಮೀಣ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಸ್ವಯಂ- ನಿಧಿ ಶಸ್ತ್ರಚಿಕಿತ್ಸಾ ಯೋಜನೆಯಾಗಿದೆ. ಈ ಯೋಜನೆ ಮರುಜಾರಿಗೆ ಸ್ವಾಗತಾರ್ಹ. ಇಂತಹ ಯೋಜನೆಗಳಿಂದ ದೇಶದ ಅಭಿವೃದ್ಧಿ ಅಲ್ಲದೇ ಬಡವರ, ರೈತರ, ಹಳ್ಳಿ ಜನರ ಆರೋಗ್ಯ ಸುಧಾರಣೆ ಹಾಗೂ ಚಿಕಿತ್ಸೆಗಳಿಗೆ ಸಂಜೀವಿನಿಯಾಗಲಿ ಎನ್ನುವುದು ಆಶಯ,' ಎಂದು ಅಜಯ್ ಎನ್ನುವವರು ಕೂ ಮಾಡಿದ್ದಾರೆ.

"ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆ. ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಆದರೆ ಶಸ್ತ್ರಚಿಕಿತ್ಸೆ ಅವಶ್ಯವಿಲ್ಲದ ಯಾವುದೇ ವೈದ್ಯಕೀಯ ಚಿಕಿತ್ಸೆ ಯೋಜನೆಯಲ್ಲಿ ಲಭ್ಯವಿರುವುದಿಲ್ಲ. ಕೀಮೊಥೆರಪಿ, ರೇಡಿಯೋಥೆರಪಿ, ಜಾಯಿಂಟ್ ಬದಲಾವಣೆ, ಸುಟ್ಟ ಗಾಯಗಳು, ರಸ್ತೆ ಅಪಘಾತಗಳು, ಹಲ್ಲಿನ ಶಸ್ತ್ರಚಿಕಿತ್ಸೆ, ಚರ್ಮದ ಗ್ರಾಫ್ಟಿಂಗ್, ಸ್ಟಂಟ್, ಇಂಪ್ಲಾಂಟ್ಸ್ ಇತ್ಯಾದಿ... ಇವುಗಳನ್ನು ಒಳಗೊಂಡು ಯೋಜನೆ ಜಾರಿ ಮಾಡುವುದು ಒಳ್ಳೆಯದು,'' ಎಂದು ಶಿಕ್ಷಕ ಶರತ್ ಗೌಡ ಹೇಳಿದ್ದಾರೆ.












Click it and Unblock the Notifications