ಮತದಾರರ ಮಾಹಿತಿ ಸಂಗ್ರಹ ಆರೋಪ ಆಧಾರ ರಹಿತ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ನವೆಂಬರ್ 17: ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಆಧಾರರಹಿತವಾಗಿ ಆರೋಪಿಸಿದ್ದಾರೆ. ಎನ್‌ಜಿಓಗೆ ಸಮೀಕ್ಷಾ ಕೆಲಸ ವಹಿಸುವುದು ಇದೇ ಮೊದಲಲ್ಲ. ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗೀತನಕ್ಕೆ ಕನ್ನ ಹಾಕಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ನವರು ತಮ್ಮ ವಿಚಾರಗಳಲ್ಲಿ ದಿವಾಳಿಯಾಗಿದ್ದಾರೆ. ಹೀಗಾಗಿ ಆಧಾರರಹಿತವಾಗಿ ಆರೋಪ ಮಾಡುತ್ತಿದ್ದಾರೆ.
ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವಹಿಸಿರುತ್ತದೆ. ಅವರು ಸಮೀಕ್ಷಾ ಕೆಲಸವನ್ನು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಓ) ನೀಡಿರುತ್ತಾರೆ. ಇದೇನು ಮೊದಲ ಬಾರಿ ನೀಡಿರುವುದಲ್ಲ. 2018ರಲ್ಲಿ ಸರ್ಕಾರದ ಕಾಲದಲ್ಲಿಯೂ ಹೀಗೆ ಎನ್‌ಜಿಓಗಳಿಗೆ ನೀಡಲಾಗಿದೆ. ಎನ್‌ಜಿಒ, ಬಿಎಲ್‌ಡಿ ದುರ್ಬಳಕೆ ಮಾಡಲಾಗಿದೆ ಆದ್ದರಿಂದ ಚುನಾವಣಾ ಆಯೋಗ ನೀಡಿರುವ ಆದೇಶದಿಂದ ಹಿಡಿದು ಈವರೆಗೆ ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಆರೋಪ ಅಲ್ಲಗಳೆದ ಸಿಎಂ
ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ. ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಈವರೆಗೆ ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ ಎಂದು ಪುನರಚ್ಚರಿಸಿದರು.
ಮತದಾರರಿಂದ ಅಕ್ರಮವಾಗಿ ಎನ್‌ಜಿಓ ಮಾಹಿತಿ ಸಂಗ್ರಹಿಸಿದೆ, ಮಾಹಿತಿ ದುರ್ಬಳಕೆ ಆಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಇನ್ನಿತರ ಅಧಿಕಾರಿಗಳೇ ಕಾರಣ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಮತದಾರರ ಪಟ್ಟಿ ತಿದ್ದುವುದು ಅಕ್ಷಮ್ಯ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ಕಿಡಿ ಕಾರಿದ್ದರು. ಪ್ರಕರಣದ ಹಿಂದೆ ಸಚಿವರು ಇದ್ದಾರೆ ಎಂದ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ನೇರವಾಗಿ ಹೊಣೆಯಾಗಿಸಿದರು. ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣ ಕುರಿತು ಮುಖ್ಯಮಂತ್ರಿ, ಬಿಬಿಎಂಪಿ ಆಯುಕ್ತರು, ಇನ್ನಿತರ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರು.












Click it and Unblock the Notifications