ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಫೈನಲ್!
ಹಾವೇರಿ: ಇಡೀ ರಾಜ್ಯದ ಗಮನ ಸೆಳೆದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಹಾವೇರಿಯ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ಮೊಹಮ್ಮದ್ ಯೂಸುಫ್‌ಗೆ ಟಿಕೆಟ್ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಕಾಂಗ್ರೆಸ್ ನಾಯಕರು. ಆದರೆ ಈ ಹಿಂದೆ ಶಿಗ್ಗಾಂವಿ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಸ್ಪರ್ಧೆ ಖಚಿತ ಎನ್ನಲಾಗಿತ್ತು.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಪಕ್ಷವನ್ನ ಈ ಬಾರಿ ಅಧಿಕಾರಕ್ಕೆ ತರಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಇದೇ ನಿಟ್ಟಿನಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದೀಗ ಕಾಂಗ್ರೆಸ್ ತನ್ನ 4ನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈಗಾಗಲೇ ಕಾಂಗ್ರೆಸ್ 224 ಅಭ್ಯರ್ಥಿಗಳ ಪೈಕಿ 209 ಅಭ್ಯರ್ಥಿಗಳನ್ನ ಚುನಾವಣಾ ಕಣಕ್ಕಿಳಿಸಿದೆ. ಈ ಪೈಕಿ ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೆ ಕುತೂಹಲ ಕೆರಳಿಸಿದ್ದರು ಕಾಂಗ್ರೆಸ್ ನಾಯಕರು.

ಕಾಂಗ್ರೆಸ್ ಲೆಕ್ಕಾಚಾರ ಬದಲಾಯ್ತಾ?
ಅಂದಹಾಗೆ ಈ ಮೊದಲು 2 ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದ ಕಾಂಗ್ರೆಸ್, ಶಿಗ್ಗಾಂವಿ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿತ್ತು. ಆ ಪ್ರಕಾರ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಬಲ ಸವಾಲು ಹಾಕಬಲ್ಲ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಹುಡುಕಾಟ ಕೂಡ ನಡೆದಿತ್ತು. ಈ ಸಮಯದಲ್ಲಿ ವಿನಯ್ ಕುಲಕರ್ಣಿ ಹೆಸರು ಬಹುತೇಕ ಫೈನಲ್ ಆಗಿತ್ತು ಎನ್ನುಷ್ಟರಲ್ಲೇ ಅಭ್ಯರ್ಥಿ ಆಯ್ಕೆಯೇ ಬದಲಾಗಿದೆ.
ಹೇಗಿತ್ತು ಶಿಗ್ಗಾಂವಿ ರಣತಂತ್ರ?
ಶಿಗ್ಗಾಂವಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಲಿಂಗಾಯತರು, ಮುಸ್ಲಿಮರು ಸೇರಿದಂತೆ ಕುರುಬರು ಇದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ನೀಡಬಹುದು ಎಂಬ ಲೆಕ್ಕಾಚಾರ ಶುರುವಾಗಿತ್ತು. ಇದೆಲ್ಲದರ ಜೊತೆಗೆ ಶಿಗ್ಗಾಂವಿಯ ಮಾಜಿ ಕಾಂಗ್ರೆಸ್ ಶಾಸಕ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಗೆ ವಿನಯ್ ಕುಲಕರ್ಣಿಗೆ ಟಿಕೆಟ್ ದೊರೆತರೆ, ಬೆಂಬಲಿಸುವುದಾಗಿ ಅಜ್ಜಂಪೀರ್ ಖಾದ್ರಿ ಭರವಸೆ ನೀಡಿದ ನಂತರ ಕುತೂಹಲ ದುಪ್ಪಟ್ಟಾಗಿತ್ತು.
ಧಾರವಾಡ ಅಭ್ಯರ್ಥಿಯಾಗಿ ಸ್ಪರ್ಧೆ
ಇತ್ತ ವಿನಯ್ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಲೆಕ್ಕಚಾರ ಶುರುವಾಗಿರುವಾಗಲೇ ಕಾಂಗ್ರೆಸ್ ಬೇರೆಯದ್ದೇ ನಿರ್ಧಾರ ತೆಗೆದುಕೊಂಡಿತ್ತು. ಧಾರವಾಡದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿಗೆ ಟಿಕೆಟ್ ಫೈನಲ್ ಮಾಡಿತ್ತು ಕಾಂಗ್ರೆಸ್. ಇದೀಗ ಅಂತಿಮವಾಗಿ ಮೊಹಮ್ಮದ್ ಯೂಸುಫ್‌ಗೆ ಶಿಗ್ಗಾಂವಿ ಟಿಕೆಟ್ ನಿಡಿರುವ ಕಾಂಗ್ರೆಸ್, ಸ್ಥಳೀಯ ಮಟ್ಟದಲ್ಲಿ ಬೇರೆಯದ್ದೇ ತಂತ್ರ ಹೂಡಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ವಿನಯ್ ಕುಲಕರ್ಣಿಗೆ ಭಾರಿ ಹಿನ್ನಡೆ
ಒಂದು ಕಡೆ ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದರೆ, ಮತ್ತೊಂದು ಕಡೆ ಧಾರವಾಡದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆಯಾಗಿದೆ. ವಿನಯ್ ಕುಲಕರ್ಣಿ ಧಾರವಾಡ ಪವೇಶಿಸಲು ಕೋರಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಮೇ 10ರಂದು ನಡೆಯುವ ಚುನಾವಣೆಗೆ ಈಗಾಗಲೇ ವಿನಯ್ ಕುಲಕರ್ಣಿ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಮುಂದಿನ ಕ್ರಮದ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
ಒಟ್ಟಾರೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ವಿಭಿನ್ನ ನಿಲುವನ್ನ ಕಾಂಗ್ರೆಸ್ ತೆಗೆದುಕೊಳ್ಳುತ್ತಿದೆ. ಸಿಎಂ ಕ್ಷೇತ್ರದಲ್ಲಿ ಮೊದಲು ಪ್ರಬಲ ಅಭ್ಯರ್ಥಿ ಹಾಕಲು ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಆ ಯೋಜನೆಯೇ ಬದಲಾಗಿ ಹೋಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಅಧಿಸೂಚನೆ ಏಪ್ರಿಲ್ 13ರ ಗುರುವಾರ ಪ್ರಕಟವಾಗಿದ್ದು, ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಬಹುದು.












Click it and Unblock the Notifications