ಕರ್ನಾಟಕ ಚುನಾವಣೆ: ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರ ತೆರವಿಗೆ ಚುನಾವಣಾಧಿಕಾರಿ ಸೂಚನೆ
ಬೆಂಗಳೂರು, ಮಾರ್ಚ್ 29: ಕರ್ನಾಟಕದ ಸಾರ್ವತ್ರಿಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಇದರೊಂದಿಗೆ ಮಾರ್ಚ್29ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಸಲುವಾಗಿ ಬೆಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಕೆಲವು ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂಟು ವಲಯಗಳ ಜಂಟಿ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಈ ವೇಳೆ ಅಧಿಕಾರಿಗಗಳಿಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅತ್ಯಗತ್ಯ ಸೂಚನೆ ನಿಡಿದರು. ನೀತಿ ಸಂಹಿತೆ ಉಲ್ಲಂಘನೆ ಆಗಿದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದರು.

ಸರ್ಕಾರಿ ಕಛೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ತೆಗೆಯಲು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಪ್ರತಿನಿಧಿಗಳ ಭಾವಚಿತ್ರ, ಹೆಸರು ತೆರವಿಗೆ ನಿರ್ದೇಶನ
ಬೆಂಗಳೂರು ನಗರದಲ್ಲಿ ಸರ್ಕಾರಿ ಕಛೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಬಿತ್ತಿಪತ್ರಗಳು, ಗೋಡೆ ಬರಹಗಳು ಇರುವಂತಿಲ್ಲ. ಯಾರಾದರು ಪೋಸ್ಟರ್, ಬ್ಯಾನರ್ ಹಾಕಿದರೆ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಿ ಎಂದರು.
ಬಿಬಿಎಂಪಿಯ ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದಾದರು ಕಾರ್ಯಕ್ರಮ ಆಯೋಜಿಸಿದ್ದಲ್ಲಿ ತತ್‌ಕ್ಷಣ ಅದನ್ನು ರದ್ದುಪಡಿಸಬೇಕು. ಚುನಾವಣೆ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇರುವಂತಿಲ್ಲ.

ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇದ್ದರೆ ಕೂಡಲೆ ಅದನ್ನು ತೆಗೆಯಬೇಕು. ಇಲ್ಲವೇ ಬಟ್ಟೆಯ ಮೂಲಕ ಕಾಣದಂತೆ ಮುಚ್ಚಬೇಕೆಂದರು. ರಸ್ತೆ ಬದಿಯಿರುವ ನಾಮಫಲಕಗಳಲ್ಲಿರುವ ಜನಪ್ರತಿನಿಧಿಗಳ ಹೆಸರು ತೆರವುಗೊಳಿಸಬೇಕು. ಜನನಾಯಕರ ಹೆಸರಾಗಲಿ, ಸಂಪರ್ಕ ಸಂಖ್ಯೆಯಾಗಲಿ ಇರುವಂತಿಲ್ಲ ಎಂದು ತಿಳಿಸಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳು ಎಷ್ಟು? ಪಟ್ಟಿ ಕೊಡಿ
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳ ವ್ಯಾಪ್ತಿಯಲ್ಲಿ ಯೋಜನಾ ವಿಭಾಗ, ಕೆರೆಗಳ ವಿಭಾಗ, ರಾಜಕಾಲುವೆ ವಿಭಾಗ ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪಟ್ಟಿಯನ್ನು ಕೂಡಲೆ ಕೊಡಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ಈಗಾಗಲೇ ಕಾರ್ಯಾದೇಶ ನೀಡಿ ಕೆಲಸ ಪ್ರಾರಂಭಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು. ಹೊಸದಾಗಿ ಟೆಂಡರ್ ಕರೆಯುವುದಾಗಲಿ, ಹೊಸದಾಗಿ ಕಾರ್ಯಾದೇಶ ನೀಡುವುದಾಗಲಿ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ನಿಯಮ ಉಲ್ಲಂಘಿಸುವುದು ಕಂಡಬಂದರೆ ಚುನಾವಣಾ ಆಯೋಗದಿಂದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಜಯರಾಮ ರಾಯಪುರ, ಎಲ್ಲಾ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications