Sankey flyover: ಸ್ಯಾಂಕಿ ಮೇಲ್ಸೇತುವೆ ಯೋಜನೆ ಕೈಬಿಡುವಂತೆ ಕಪ್ಪು ಬಟ್ಟೆ ಧರಿಸಿ ಜನರ ಪ್ರತಿಭಟನೆ
Bengaluru, social media, selfie, Sankey, lake, flyover, Basavaraj Bommai, ಬೆಂಗಳೂರು, ಸಾಮಾಜಿಕ ಮಾಧ್ಯಮ, ಸೆಲ್ಫಿ, ಸ್ಯಾಂಕಿ, ಕೆರೆ, ಮೇಲ್ಸೇತುವೆ, ಬಸವರಾಜ ಬೊಮ್ಮಾಯಿ, ಬಿಬಿಎಂಪಿ
ಬೆಂಗಳೂರು, ಫೆಬ್ರವರಿ.20: ಸ್ಯಾಂಕಿ ಮೇಲ್ಸೇತುವೆ ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವುದು, ಪ್ರೇಮಿಗಳ ದಿನದಂದು ಮರಗಳನ್ನು ಅಪ್ಪಿಕೊಳ್ಳುವುದು ಮುಂತಾದ ಹಲವು ಪ್ರತಿಭಟನಾ ಮಾರ್ಗಗಳ ಬಳಿಕ ನಗರದ ನಿವಾಸಿಗಳು ಹೊಸ ರೀತಿಯ ಪ್ರತಿಭಟನೆ ನಡೆಸಿದ್ದಾರೆ.
ಕಪ್ಪು ಬಟ್ಟೆಯನ್ನು ಧರಿಸಿ, ಕೆರೆ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ "ಸ್ಯಾಂಕಿ ಉಳಿಸಿ" ಎಂಬ ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗಿದೆ.
ಸ್ಯಾಂಕಿ ಫ್ಲೈಓವರ್ ನಗರದ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಇದು ಸ್ಯಾಂಕಿ ಕೆರೆಯ ಉದ್ದಕ್ಕೂ ಇರುವ ಮರಗಳನ್ನು ಮಾತ್ರ ನಾಶಪಡಿಸುತ್ತದೆ ಎಂದು ಸ್ಥಳೀಯರು ವಾದಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ನಾಗರಿಕರಲ್ಲಿ ಮಕ್ಕಳೂ ಸಹ ಕಪ್ಪು ಬಟ್ಟೆ ಧರಿಸಿ ಒಗ್ಗಟ್ಟು ಪ್ರದರ್ಶಿಸಿದರು.

ಸುಮಾರು 200ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಎಲ್ಲರು ಸ್ಯಾಂಕಿ ಕೆರೆಯ ಬಳಿ, ಉದ್ದಕ್ಕೂ ನಡೆದು ಮೇಲ್ಸೇತುವೆ ನಿರ್ಮಾಣದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಮಲ್ಲೇಶ್ವರಂ ನಿವಾಸಿ, ನಟಿ, ಗಾಯಕಿ ವಸುಂಧರಾ ದಾಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಲ್ಲೇಶ್ವರಂ, ವೈಯಾಲಿಕಾವಲ್ ಮತ್ತು ಸದಾಶಿವನಗರದ ನಿವಾಸಿಗಳ ಸಾಮೂಹಿಕ 'ಸಿಟಿಜನ್ಸ್ ಫಾರ್ ಸ್ಯಾಂಕಿ' ಸಂಘಟನೆಯ ನಿವಾಸಿಗಳು ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಮತ್ತು ಟಿ ಚೌಡಯ್ಯ ರಸ್ತೆಯಿಂದ 18ನೇ ಕ್ರಾಸ್‌ವರೆಗಿನ ಮೇಲ್ಸೇತುವೆ ಅಗಲೀಕರಣದ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಟಿಜನ್ ಫಾರ್ ಸ್ಯಾಂಕಿ ಪ್ರಕಾರ, ಸದಾಶಿವನಗರದ 91% ನಿವಾಸಿಗಳು ಯೋಜನೆಯ ವಿರುದ್ಧ ಮತ ಹಾಕಿದ್ದಾರೆ. ಈ ಪ್ರದೇಶದ 4,000 ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪೋಸ್ಟ್‌ಕಾರ್ಡ್ ಬರೆದು ಯೋಜನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಮರಗಳನ್ನು ಕಡಿಯುವುದನ್ನು ವಿರೋಧಿಸಿ 1,000 ಕ್ಕೂ ಹೆಚ್ಚು ನಾಗರಿಕರು ಅರಣ್ಯ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಆಕ್ಷೇಪಣೆ ಪತ್ರ ಬರೆದಿದ್ದಾರೆ. 27,000 ಕ್ಕೂ ಹೆಚ್ಚು ಜನರು ಯೋಜನೆ ವಿರುದ್ಧ ಮನವಿಗೆ ಸಹಿ ಹಾಕಿದ್ದಾರೆ.

ಭಾಷ್ಯಂ ವೃತ್ತ ಮತ್ತು ಮಲ್ಲೇಶ್ವರಂ 18ನೇ ಕ್ರಾಸ್ ನಡುವಿನ 1.1 ಕಿ.ಮೀ ರಸ್ತೆ ಅಗಲೀಕರಣದ ವಿವಾದಿತ ಯೋಜನೆಗೆ ಬಿಬಿಎಂಪಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮರುಜೀವ ನೀಡಿತ್ತು. ಈ ಪ್ರದೇಶದಲ್ಲಿ ದಟ್ಟಣೆಯನ್ನು ನಿವಾರಿಸಲು, ಮಧ್ಯ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ರಸ್ತೆಯ ಉದ್ದಕ್ಕೂ 560 ಮೀಟರ್ ಉದ್ದದ ನಾಲ್ಕುಪಥದ ಮೇಲ್ಸೇತುವೆಯನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ.
ಈ ಯೋಜನೆಯು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಬಳಿ ಇದೆ ಎಂದು ಬಿಬಿಎಂಪಿ ಹೇಳಿದರೆ, ವಾರದ ಹಿಂದೆ ಈ ಯೋಜನೆಗಾಗಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಆದರೆ, ಯೋಜನೆಯನ್ನು ಬಿಡುವವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿ ತಿಳಿಸಿದೆ.












Click it and Unblock the Notifications