ಚರ್ಚ್‌ಸ್ಟ್ರೀಟ್ ಸ್ಫೋಟಕ್ಕೆ ಒಂದು ತಿಂಗಳು, ಆರೋಪಿ ಎಲ್ಲಿ?
ಬೆಂಗಳೂರು, ಜ.28 : ಬೆಂಗಳೂರಿನ ಚರ್ಚ್‌ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಒಂದು ತಿಂಗಳು ಕಳೆದಿದೆ. ಇದುವರೆಗೂ ಆರೋಪಿಗಳು ಸಿಕ್ಕಿಬಿದ್ದಿಲ್ಲ. 100ಕ್ಕೂ ಹೆಚ್ಚು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದರೆ, ಆರೋಪಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಡಿ.28ರಂದು ರಾತ್ರಿ ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ಮೊದಲು ಬೆಂಗಳೂರಿನ ಪೊಲೀಸರು ಆರಂಭಿಸಿದರು. ನಂತರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೊಂಡಿದೆ. [ಚರ್ಚ್ ಸ್ಟ್ರೀಟ್ ದಾಳಿ ರುವಾರಿ: ಸಿಮಿ? ಅಲ್ ಉಮಾ?]

ಸ್ಫೋಟ ನಡೆದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು ಮತ್ತು ಸ್ಥಳವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸಾಕ್ಷಿಗಳು ನಾಶವಾಗದಂತೆ ಎಚ್ಚರಿಕೆ ವಹಿಸಿದ್ದರು. ಜನರು ಸಹ ಸ್ಫೋಟ ನಡೆದ ಸ್ಥಳದಿಂದ ದೂರ ಹೋಗಿ ಪೊಲೀಸರಿಗೆ ಸಹಕಾರ ನೀಡಿದ್ದರು. [ಬೆಂಗಳೂರಿನಲ್ಲಿ ಭೀತಿ ಹುಟ್ಟು ಹಾಕಿದ್ದು ಅಂಜುಮನ್ ಸಂಸ್ಥೆ]
ಗೊಂದಲ ಉಂಟಾಗಿದೆಯೇ? : ಸ್ಫೋಟ ನಡೆದ ನಂತರ ಬಾಂಬ್ ಇಟ್ಟವರು ಯಾರು? ಎಂಬ ಹುಡುಕಾಟ ಆರಂಭವಾಗುತ್ತದೆ. ಇಂಡಿಯನ್ ಮುಜಾಹಿದ್ದೀನ್, ಸಿಮಿ, ಅಲ್ ಉಮಾ ಸಂಘಟನೆಯ ಹೆಸರು ಹೇಳಿಬರುತ್ತಿತ್ತು. ಹಲವಾರು ಹೆಸರುಗಳು ಮಾಧ್ಯಮಗಳ ಮೂಲಕ ಹರಿದಾಡಲು ಆರಂಭವಾಯಿತು. [ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಅಕ್ಕಪಕ್ಕದ ಜಿಲ್ಲೆಗಳಿಗೆ ಭೇಟಿ ನೀಡಿ ತನಿಖೆ ನಡೆಸಿದರು. ನೆರೆಯ ತಮಿಳುನಾಡು ರಾಜ್ಯಕ್ಕೆ ತೆರಳಿ ಅಲ್ ಉಮಾ ಸಂಘಟನೆಯ ಕೈವಾಡವಿರಬಹುದು ಎಂಬ ಬಗ್ಗೆಯೂ ತನಿಖೆ ನಡೆಸಿದರು. ಆದರೆ, ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರು ಪೊಲೀಸರು ಐಎಸ್ಐಎಸ್ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಮೆಹದಿಯನ್ನು ಬಂಧಿಸಿದ ನಂತರ ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿತು. ಆದ್ದರಿಂದ ಪ್ರತೀಕಾರದ ದಾಳಿ ಎಂಬ ಲೆಕ್ಕಾಚಾರ ಆರಂಭವಾಯಿತು. ನಂತರ ಭಟ್ಕಳದಲ್ಲಿ ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಯಿತು. ಎಲ್ಲಾ ತನಿಖೆಗಳು ಒಟ್ಟಿಗೆ ನಡೆಯುತ್ತಿವೆ.
100 ಜನರು ತನಿಖೆಗೆ : ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಪ್ರಕರಣದ ತನಿಖೆಯಲ್ಲಿ 100 ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಅವರು ತನಿಖೆ ನಡೆಸಿದ್ದಾರೆ. ಸ್ಫೋಟ ನಡೆದ ಸ್ಥಳದ ಸರಿಯಾದ ಸಿಸಿಟಿವಿ ದೃಶ್ಯಗಳು ದೊರೆಯದಿರುವುದು ತನಿಖೆಯನ್ನು ವಿಳಂಬ ಮಾಡುತ್ತಿರಬಹುದು.
ಸರಿಯಾದ ದೃಶ್ಯಾವಳಿಗಳು ದೊರೆಯದಿದ್ದರೆ ಪೊಲೀಸರಿಗೆ ಶಂಕಿತರ ರೇಖಾಚಿತ್ರ ತಯಾರಿಸಲು ಸಾಧ್ಯವಿಲ್ಲ. ರೇಖಾ ಚಿತ್ರವನ್ನು ತಯಾರಿಸದಿದ್ದರೆ ಶಂಕಿತನನ್ನು ಹಿಡಿದು ವಿಚಾರಣೆ ನಡೆಸುವುದು ಕಷ್ಟ. ಆದ್ದರಿಂದ ತನಿಖೆ ವಿಳಂಬವಾಗುತ್ತಿರಬಹುದು.












Click it and Unblock the Notifications