ಚಿತ್ರಸಂತೆ-2022ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಮಾರ್ಚ್ 27) ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಆಯೋಜಿಸಿದ್ದ ಚಿತ್ರಸಂತೆ - 2022 ಕಾರ್ಯಕ್ರಮಕ್ಕೆ ಭಾರತಾಂಬೆ ಕಲಾಕೃತಿ ಪಕ್ಕ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಿದರು.
ಕುಮಾರಕೃಪಾ ರಸ್ತೆಯಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಸಮರ್ಪಿಸಲಾಗಿದೆ.
ದೇಶ್‌ಬಂಧು ಗುಪ್ತ, ರಣ್‌ಬೀರ್ ಸಿಂಗ್, ಪೀರ್ ಅಲಿಖಾನ್ ಮತ್ತಿತರ 200 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಚಿತ್ರಸಂತೆಯಲ್ಲಿ ಪ್ರದರ್ಶಿಸಲಾಗಿದೆ.
ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥನಾರಾಯಣ, ಎಸ್ ಟಿ ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ , ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಚಿತ್ರಸಂತೆಯಲ್ಲಿ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು.

ದೇಶದ 16 ರಾಜ್ಯಗಳಿಂದ 1000ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಇನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ 'ಕಲಾ ಪ್ರದರ್ಶನ' ಉದ್ಘಾಟನೆ ಮಾಡಿದ್ದಾರೆ. ಪರಿಷತ್ತಿನ 12 ಗ್ಯಾಲರಿಗಳಲ್ಲಿ ಆಯ್ದ ಕಲಾವಿದರ ಕಲಾಕೃತಿಗಳು 10 ದಿನಗಳವರೆಗೆ ಪ್ರದರ್ಶನ ಆಗಲಿದೆ.
ಕಳೆದ ಬಾರಿ ಆನ್‌ಲೈನ್‌ನಲ್ಲಿ ನಡೆದಿದ್ದ ಚಿತ್ರಸಂತೆ
ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಕಳೆದ ವರ್ಷ 18ನೇ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ನಡೆಸಲಾಗಿತ್ತು. ಈ ವರ್ಷ ಜನವರಿ ಮೊದಲ ವಾರದಲ್ಲಿ ಚಿತ್ರಸಂತೆಯು ನಡೆಯಬೇಕಾಗಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ವಿಳಂಬವಾಗಿದ್ದು, ಮಾರ್ಚ್ 27ರಿಂದ ಚಿತ್ರಸಂತೆ ಆರಂಭವಾಗಿದೆ.
ಇನ್ನು ಚಿತ್ರಸಂತೆ ಪ್ರಯುಕ್ತ ಭಾನುವಾರ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಕುಮಾರಕೃಪಾ ರಸ್ತೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.












Click it and Unblock the Notifications