ಮಹನೀಯರ ಕುರಿತ ಪಠ್ಯ ಕೈ ಬಿಟ್ಟರೆ ಮಕ್ಕಳಿಗೆ ಚರಿತ್ರೆ ತಿಳಿಯದು: ಸಿದ್ದರಾಮಯ್ಯ
ಬೆಂಗಳೂರು ಜೂ.12: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ, ಸಂವಿಧಾನ, ಚರಿತ್ರೆ ಬಗ್ಗೆ ಗೊತ್ತಿರದವರು ಪಠ್ಯ ಪರಿಷ್ಕರಣೆ ಮಾಡಿದ್ದರಿಂದ ಇಂದು ಮಕ್ಕಳಿಗೆ ಹಿಂದಿನ ಚರಿತ್ರೆ ಓದಿ ತಪ್ಪುಗಳನ್ನು ತಿದ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.
ಭಾನುವಾರ ನಗರದ ಬನ್ನೇರುಘಟ್ಟದಲ್ಲಿ ನಡೆದ ಭೋವಿ ಸಮುದಾಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಹಲವು ಜಾತಿ, ಧರ್ಮದ ಜನರಿಂದ ಕೂಡಿದೆ. ಅಂಬೇಡ್ಕರ್ ಜಗತ್ತಿನ ವಿವಿಧ ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ನಡೆಸಿ ಭಾರತಕ್ಕೆ ದೇಶಕ್ಕೆ ಅಗತ್ಯ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ರವರು ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗದಿದ್ದರೆ ನಮಗೆ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ ಎಂದು ಅಂಬೇಡ್ಕರ್ ಅವರ ಮಹತ್ವ ತಿಳಿಸಿದರು.
ಹಿಂದೂ ವಿರೋಧಿ ಪಟ್ಟ ಕಟ್ಟಿದರು:
ಬಿಜೆಪಿ ಸರ್ಕಾರ ಮತ್ತು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅಂಬೇಡ್ಕರ್ ಬಗೆಗಿನ "ಸಂವಿಧಾನ ಶಿಲ್ಪಿ" ಎಂಬ ಪದವನ್ನೇ ಪಠ್ಯದಿಂದ ತೆಗೆದುಹಾಕಿದ್ದರಿಂದ ನಾಡಿಗೆ ಅನ್ಯಾಯವಾಗಿದೆ. ಅಲ್ಲದೇ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ವಿಷಯ ಕೈಬಿಡಲಾಗಿದೆ. ಇದರಿಂದ ಮಕ್ಕಳಿಗೆ ಚರಿತ್ರೆ ಮರಿಚಿಕೆ ಆಗಲಿದೆ ಎಂದು ದೂರಿದರು.

ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂಬುದನ್ನು ಎಲ್ಲರು ಓದಿದ್ದೇವೆ, ಈ ಸತ್ಯವನ್ನು ಹೇಳಿದ್ದಕ್ಕೆ ನನಗೆ ಹಿಂದೂ ವಿರೋಧಿ, ಆರ್ ಎಸ್ ಎಸ್ ವಿರೋಧಿ ಎಂಬ ಪಟ್ಟ ಕಟ್ಟಿದರು. ಸತ್ಯವನ್ನು ಯಾವಾಗಲೂ ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಮಿಲ್ಲರ್ ಆಯೋಗ ರಚಿಸಿ ದೇಶದಲ್ಲೇ ಮೊದಲು (1917) ಬ್ರಾಹ್ಮಣೇತತರಿಗೆ ಮೀಸಲಾತಿ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು.

ಭೋವಿ ಸಮಾಜಕ್ಕೆ ನೀಡಿದ್ದ ಜಮೀನು ಕೋರ್ಟಲ್ಲಿದೆ!
ಭೋವಿ ಸಮಾಜದವರು ತುಂಬಾ ನಿಯತ್ತಿನ ಜನ. ನಾನು ಎದುರಿಸಿದ 13 ಚುನಾವಣೆಗಳಲ್ಲಿ ನನಗೆ ಸಹಾಯ ಮಾಡಿದವರು ಭೋವಿ ಸಮಾಜದವರು. ಜನರು. ಶಿವರಾಜ್ ತಂಗಡಗಿ ಸೇರಿ ಬೆಂಗಳೂರಿನಲ್ಲಿ ಭೋವಿ ಸಮಾಜದ ಬೃಹತ್ ಸಮಾವೇಶ ಮಾಡಿದ್ದೆವು. ಅಂದಿನ ಸಮಾವೇಶದಲ್ಲಿ ಶ್ರೀಗಳ ಮನವಿ ಮೇರೆಗೆ ಭೋವಿ ನಿಗಮ ಸ್ಥಾಪಿಸಿದ್ದು ಕಾಂಗ್ರೆಸ್ ಪಕ್ಷ. ಸದ್ಯ ಈ ಸಮಾಜಕ್ಕೆ ನೀಡಿದ ಜಮೀನು 4 ವರ್ಷದಿಂದ ನ್ಯಾಯಾಲಯದಲ್ಲೇ ಉಳಿದಿದೆ ಎಂದು ಅಸಮಾಧಾನ ಹೊರಹಾಕಿದರು.
ಎಲ್ಲಿ ಜಾತಿ ವ್ಯವಸ್ಥೆಗೆ ಜಡತ್ವ ಇರುತ್ತದೆ ಅಲ್ಲಿ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ಎಲ್ಲ ಜನರಿಗೆ ಶಿಕ್ಷಣ, ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಜನರಲ್ಲಿ ಜಾಗೃತಿ ಮೂಡಬೇಕು. ಅಭಿವೃದ್ಧಿ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಬೇಕು. ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಬಳಕೆಯಾಗುವಂತೆ ಬಿಜೆಪಿ ಸರ್ಕಾರ ಅನುದಾನ ಹಂಚಿಕೆ ಮಾಡಬೇಕು.
ಸಂವಿಧಾನದ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ನಡೆಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications