ಬೆಂಗಳೂರಿನಲ್ಲಿ ಬಾಲ್ಯವಿವಾಹ: ಬಾಲಕಿಯ ಅಜ್ಜಿ ಸೇರಿ 9 ಮಂದಿಯ ಮೇಲೆ ಪ್ರಕರಣ ದಾಖಲು
ಬೆಂಗಳೂರು ಫೆಬ್ರವರಿ 19: ಮದುವೆಯಾದ ಒಂದೇ ದಿನದಲ್ಲಿ 8ನೇ ತರಗತಿಯ ಬಾಲಕಿಯನ್ನು ಬಾಲ್ಯವಿವಾಹದಿಂದ ರಕ್ಷಿಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರದಲ್ಲಿ ನಡೆದಿದೆ.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ 14 ವರ್ಷದ ಬಾಲಕಿಯ ತಾಯಿ ರಾಜಮ್ಮ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಬಾಲಕಿಯ ಅಜ್ಜಿ 8ನೇ ತರಗತಿ ಬಾಲಕಿಯನ್ನು 24 ವರ್ಷದ ಯುವಕನೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ದೇವಸ್ಥಾನದಲ್ಲಿ ಮದುವೆ ಮಾಡಿದ್ದರು. ಇದು ಬಾಲಕಿಯ ಪೋಷಕರಿಗೆ ತಿಳಿದು ಅವರು ಠಾಣೆಯಲ್ಲಿ ದೂರು ನೀಡಿದ್ದಾರೆ.

9 ಜನರ ವಿರುದ್ಧ ಎಫ್‌ಐಆರ್ ದಾಖಲು
ಬಾಲ್ಯವಿವಾಹ ಮಾಡಿದ್ದಕ್ಕಾಗಿ ಅಜ್ಜಿ, ಸಂಬಂಧಿಕರು ಮತ್ತು ವರ ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 366 (ಅಪಹರಣ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಎಫ್‌ಐಆರ್‌ನ ಪ್ರಕಾರ, ಬಾಲಕಿಯ ತಾಯಿ ಮತ್ತು ರಾಜಮ್ಮ ನಡುವೆ ಹುಡುಗಿಗೆ ಗಂಡನನ್ನು ಆಯ್ಕೆ ಮಾಡುವ ಬಗ್ಗೆ ಘರ್ಷಣೆಯೂ ಇದ್ದ ಕಾರಣ ರಾಜಮ್ಮ ಬಾಲಕಿಯ ಬಾಲ್ಯ ವಿವಾಹವನ್ನು ಮಾಡಿದ್ದಾಳೆ.
ಬಾಲ್ಯವಿವಾಹ ಪ್ರಕರಣ ದಾಖಲಾದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸರ್ಜಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. "ಹುಡುಗಿ ತನ್ನ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದಾಳೆ. ಆಕೆ ಇನ್ನೂ 8ನೇ ತರಗತಿಯ ಹುಡುಗಿ. ಪುರೋಹಿತ ಸೇರಿದಂತೆ ಮದುವೆಗೆ ಹಾಜರಾದ ಎಲ್ಲರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಪರಿಗಣಿಸಲಾಗುವುದು. ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಅಜ್ಜಿ ಮನೆಯಲ್ಲಿದ್ದಳು. ಈ ವೇಳೆ ಬಾಲಕಿಗೆ ಮದುವೆ ಮಾಡಲಾಗಿದೆ'' ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಕೀಲೆ ಗೀತಾ ಆಕ್ರೋಶಗೊಂಡರು.
ಬಾಲ್ಯ ವಿವಾಹ ಹೆಚ್ಚಳ
ವೇಗವಾಗಿ ಬೆಳೆಯುತ್ತಿರುವ ಜಾಗತಿಕ ನಗರವೆಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರಿನಲ್ಲಿ 2020 ರಿಂದ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ ಎಂದು ವರದಿ ಬಹಿರಂಗ ಪಡಿಸಿದೆ. ಈ ವರ್ಷ 2022ರ ಜನವರಿಯಿಂದ ಆಗಸ್ಟ್‌ವರೆಗೆ ಬೆಂಗಳೂರಿನಲ್ಲಿ 51 ಬಾಲ್ಯವಿವಾಹ ದೂರುಗಳು ಬಂದಿದ್ದು, ಅವುಗಳಲ್ಲಿ 42 ಮಾತ್ರ ತಡೆಯಲು ಸಾಧ್ಯವಾಯಿತು ಎಂದು ವರದಿ ಹೇಳಿದೆ.
ಈ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನಡೆಸುವ ಮದುವೆಯ ಯತ್ನಗಳಲ್ಲಿ ಕನಿಷ್ಠ 84% ರಷ್ಟು ಮದುವೆಗಳನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಪ್ರತಿ ತಿಂಗಳು ಒಂದಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ಅಕ್ರಮವಾಗಿ ನಡೆಯುತ್ತಿವೆ ಎಂದು ಅಂಕಿಅಂಶಗಳು ಹೇಳಿವೆ.
2020 ರಿಂದ ಆಗಸ್ಟ್ 2022 ರ ನಡುವೆ ಬೆಂಗಳೂರಿನಲ್ಲಿ ಒಟ್ಟು 47 ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳು ಹೇಳಿವೆ. 2.5 ವರ್ಷಗಳ ಈ ಅವಧಿಯಲ್ಲಿ ಒಟ್ಟು 279 ದೂರುಗಳು ಬಂದಿದ್ದು, 232 ಮದುವೆಗಳನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆ ಎಂದು ಅಂಕಿ ಅಂಶ ಹೇಳಿದೆ.
ರಾಜ್ಯದಲ್ಲಿ 2021-22ರಲ್ಲಿ ಒಟ್ಟು 418 ಬಾಲ್ಯವಿವಾಹಗಳು ನಡೆದಿದ್ದು, 2017-18ಕ್ಕೆ ಹೋಲಿಸಿದರೆ ಇದು 300% ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೊರೊನಾ ಸಾಂಕ್ರಾಮಿಕದ ವೇಳೆ ಉಂಟಾದ ಉದ್ಯೋಗ ನಷ್ಟ ಮತ್ತು ಆರ್ಥಿಕ ಅಸಮಾನತೆಗಳ ವಿಸ್ತರಣೆಯಿಂದಾಗಿ ರಾಜ್ಯದಲ್ಲಿ ಬಾಲ್ಯವಿವಾಹಗಳ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.












Click it and Unblock the Notifications