ಕಾಗಿನೆಲೆ ಕೇವಲ ಒಂದು ಜಾತಿ, ಸಮಾಜದ ಮಠವಲ್ಲ, ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು: ಸಿದ್ದರಾಮಯ್ಯ
ಬೆಂಗಳೂರು, ಜುಲೈ. 02: ಕಾಗಿನೆಲೆ ಮಹಾಸಂಸ್ಥಾನ ಕೇವಲ ಒಂದು ಜಾತಿ, ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಸಂಸ್ಥಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೇತೂಹಳ್ಳಿಯಲ್ಲಿ ನಡೆದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ್ದಾರೆ.
'ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ, ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ನಾಂದಿ ಹಾಡಲಾಯಿತು. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ ಎಂದು ಪೀಢದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ "ನಾವು ಚುನಾವಣೆ ವೇಳೆ ನೀಡಿರುವ ಐದೂ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್ ನಲ್ಲೇ ಐದೂ ಘೋಷಣೆಗಳಿಗೂ ಹಣ ಕೊಡುತ್ತೇವೆ. ನಮ್ಮ ಐದೂ ಘೋಷಣೆಗಳು ಜಾತಿ-ಧರ್ಮ ಮೀರಿದವುಗಳು. ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗೆ ಈ ಐದು ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ" ಎಂದು ಮತ್ತೊಮ್ಮೆ ತಿಳಿಸಿದ್ದಾರೆ.
"ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪ ಸಂಖ್ಯಾತ ಸಮುದಾಯಗಳ, ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ಹೋರಾಟ ಮಾಡಿಯೇ ಮಾಡುತ್ತೇನೆ. ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಕೊನೆಯವರೆಗೂ ರಾಜಕಾರಣದಲ್ಲಿ ಕ್ರಿಯಾಶೀಲವಾಗಿರುತ್ತೇನೆ. ಬಡವರ ಪರ ರಾಜಕಾರಣ, ಹೋರಾಟ ಮುಂದುವರೆಸುತ್ತೇನೆ" ಎಂದಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಭಾಗಿಯಾದ್ದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, "2013-18 ರ ಅವಧಿಯ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದೆ. ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ನೀಡುತ್ತೇನೆ" ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರಂಜನಾನಂದಪುರಿ ಮಹಾಸ್ವಾಮಿ, ಶಾಖಾ ಮಠದ ನಿರ್ಮಾಣಕ್ಕೆ ನಾವು ಸರ್ಕಾರದ ಅನುದಾನ ಕೇಳುವುದಿಲ್ಲ, ಸಮಾಜದ ಬೆವರು ಮತ್ತು ಶ್ರಮ ಸಾಕು ಎಂದಿದ್ದಾರೆ. ಸಚಿವ ಭೈರತಿ ಸುರೇಶ್ ಶ್ರೀಮಠದ ನಿರ್ಮಾಣಕ್ಕೆ ವೈಯುಕ್ತಿಕವಾಗಿ 50 ಲಕ್ಷ ರೂಗಳ ಅನುದಾನ ನೀಡುವುದಾಗಿ ಘೋಷಿಸಿದ್ದು, ಬಳಿಕ ಹಲವರು ತಮ್ಮ ತಮ್ಮ ಶಕ್ತಿಯನುಸಾರ 50 ಸಾವಿರ ರೂಪಾಯಿಯಿಂದ 25 ಲಕ್ಷ ರೂಪಾಯಿವರೆಗೂ ತಮ್ಮ ನೆರವನ್ನು ಘೋಷಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಾಖಾ ಮಠದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ, ಶಿವಾನಂದಪುರಿ ಮಹಾಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಮಹಾಸ್ವಾಮೀಜಿ ಭಾಗವಹಿಸಿದ್ದರು. ಕುರುಬ ಸಮಾಜದ ಮುಖಂಡರಾದ ಶಾಸಕ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಕೆ.ಎಸ್.ಈಶ್ವರಪ್ಪ, ಬಂಡೆಪ್ಪ ಕಾಶಂಪುರ್, ಕೊಪ್ಪಳ ವಿವಿ ಕುಪಪತಿ ಬಿ.ಕೆ.ರವಿ ಉಪಸ್ಥಿತರಿದ್ದರು.












Click it and Unblock the Notifications