ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ
ಬೆಂಗಳೂರನ್ನು ಹಾಡಿಹೊಗಳಿದ್ದು ಇನ್ನಾದರೂ ಸಾಕು. ಸ್ವಚ್ಛ ಭಾರತದ ಉದ್ಘೋಷಗಳನ್ನು ಕೇಳಿದ್ದೂ ಸಾಕು. ನಿಜ ಹೇಳಬೇಕಂದ್ರೆ ನಮಗಂತೂ ತುಂಬಾ ಬೇಜಾರಾಗಿದೆ, ಜಿಗುಪ್ಸೆ ಕೂಡ. ಎಲ್ಲಿ ನೋಡಿದರೂ ಕಸ, ಕಸ. ಕಸ. ಈ ದರಿದ್ರ ಕಸ ಕಂಡು ಅಸಹ್ಯಪಡದ ಬೆಂಗಳೂರಿಗನೇ ಇಲ್ಲ. ಕರ್ಚೀಫಿನಿಂದ ಮೂಗು ಮುಚ್ಚಿಕೊಳ್ಳದವಳೇ ಇಲ್ಲ. ಕಸ ರಾಕ್ಷಸನಿಂದ ನಾವೆಲ್ಲ ಮುಕ್ತ ಮುಕ್ತ ಮುಕ್ತವಾಗುವ ಯಾವ ಸೂಚನೆಗಳು ಕಾಣಿಸುತ್ತಿಲ್ಲ. ಗೊತ್ತಿದ್ದರೆ ಟಿ ಎನ್ ಸೀತಾರಾಂ ಹೇಳ್ಬೇಕು.
ಕಸ ಗುಡಿಸುವವರು ಕಡಿಮೆ. ಗುಡಿಸಿದರೂ ಅದನ್ನು ಎತ್ತಾಕ್ಕೊಂಡೋಗಿ 'ಬಿಸಾಕುವ' ವ್ಯವಸ್ಥೆ ಕೂಡ ನಮ್ಮ ಬೆಂಗಳೂರಲ್ಲಿ ಅಸ್ತವ್ಯಸ್ಥ. ಕಾಲಿಟ್ಟ ಕಡೆಯೆಲ್ಲ ಕಸ, ಮೂಲೆಯಿಂದ ಬೀರುತ್ತಿರುವ ದುರ್ವಾಸನೆ. ಬಳಸಿ ಬಿಸಾಕಿದ ಬ್ಯಾಂಡೇಜು, ಡಯಾಪರ್, ಸ್ಯಾನಿಟರಿ ನ್ಯಾಪ್ ಕಿನ್, ಪ್ಲಾಸ್ಟಿಕ್ಕಿಗೆ ಬೆಂಕಿ ತಗುಲಿ ಹಬ್ಬುತ್ತಿರುವ ಹೊಗೆ! ಕೊಳಚೆ ನೀರಲ್ಲಿ ಅರಳುತ್ತಿರುವ ಸೊಳ್ಳೆಗಳು, ಶ್ವಾಸಕೋಶದ ಕಾಯಿಲೆ, ಡೆಂಗ್ಯೂ, ಹಂದಿಜ್ವರ ಬೇಕಾ? ಅದೂ ಸಿಕ್ಕತ್ತೆ, ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ. [ಕಸ ಸಮಸ್ಯೆ ನಿವಾರಿಸಲು ಮನಿಲಾ ಮಂತ್ರ]
ಈ ಪರಿಸ್ಥಿತಿಯಿಂದ ನಮಗೆ ಬಿಡುಗಡೆ ಇದೆಯಾ? ಇದ್ದರೆ ಯಾವತ್ತು? ಅದಕ್ಕೊಂದು ಡೆಡ್ ಲೈನ್ ಇದ್ಯಾ. ಹೇಗೂ ಇರಲಿ, ಆಶಾಭಾವನೆಗೇನೂ ಕೊರತೆಯಿಲ್ಲ. ಕಸ, ಕೊಳೆ, ಗಲೀಜುಗಳ ಹಾವಳಿಯನ್ನು ಮೆಟ್ಟಿನಿಂತ ನಗರಗಳ ಉದಾಹರಣೆಗಳೂ ಇವೆ. ಕೈಬೆರಳೆಣಿಕೆಗೆ ಸಿಗುವಷ್ಟು ನಾಗರೀಕರ ನಿರಂತರ ಛಲದಿಂದ ಊರು ಕ್ಲೀನ್ ಆಗಿರುವುದಕ್ಕೆ ಉದಾಹರಣೆಗಳಿವೆ. ತ್ಯಾಜ್ಯ ನಿರ್ವಹಣೆಯಲ್ಲಿ ಸೈ ಎನಿಸಿದ ಕೋಲಾರ ಬೆಂಗಳೂರಿನಿಂದ 60 ಕಿಮಿ ದೂರ ಇದೆ!

Cleanliness is next to Godliness ಎಂದು ಕರೆಕೊಟ್ಟವರಾರು. ಯಾರಾದರೂ ಇರಲಿ, ಪ್ರತಿಯೊಬ್ಬ ಪ್ರಜೆಗೂ ಇದರ ಬಗ್ಗೆ ಕಾಳಜಿ, ಅರಿವು ಮತ್ತು ನಾನೇನು ಮಾಡಬಲ್ಲೆ ಎಂಬ ಇಚ್ಛಾ ಶಕ್ತಿ ಇದ್ದರೆ ಗುಡ್. ಅವರವರ ಪರಿಸರವನ್ನು ಅವರವರೇ ಕ್ಲೀನ್ ಆಗಿಡುವುದಕ್ಕೆ ನಾಗರಿಕರು ಶ್ರಮ ಪಡುತ್ತಿರುವುದನ್ನು ಕಂಡಾಗ ಖುಷಿ ಆಗ್ತದೆ. ಅದು ಫೋನ್ ಆಪ್ ಬಳಸುವುದಿರಬಹುದು ಅಥವಾ ಆನ್ ಲೈನ್ ಪಿಟಿಷನ್ನಿಗೆ ಸಹಿಹಾಕುವುದಿರಬಹುದು. ಇಂಥ ಜನಕ್ಕೆ ಒಂದು ಫ್ಲೈಯಿಂಗ್ ಕಿಸ್! [ಕಸ ಬೇರ್ಪಡಿಸದಿದ್ದರೆ ದಂಡ]
ಸರಿ, ಈಗ ಆರಂಭದಲ್ಲಿ ನಾನೇನು ಮಾಡ್ಲಿ ಸರ್? ಅಂತ ನೀವು ಕೇಳಿದರೆ ಉತ್ತರ ಸರಳ. ಮೊದಲು ನನ್ನ ಈ ಮನವಿ ಪತ್ರವನ್ನು ನಿಮ್ಮ ಸ್ನೇಹ ಬಳಗದೊಂದಿಗೆ ಹಂಚಿಕೊಳ್ಳಿರಿ. ನಿಮ್ಮ ಮನೆ ಸದಸ್ಯರಿಗೂ ಹೇಳಿ. ಇದಕ್ಕೋಸ್ಕರವೇ ಅಗತ್ಯವಿದ್ದರೆ ಹೊಸ ಈಮೇಲ್ ಖಾತೆ ತೆರೆಯಿರಿ. ನಿಮ್ಮ ಪ್ರೀತಿಪಾತ್ರ ಫೇಸ್ ಬುಕ್ಕಿನಲ್ಲಿ ವಿಶಾಲವಾಗಿ ಹರಡಿರಿ. ಎಷ್ಟು ಜನ ಸ್ಪಂದಿಸಿದರು ಅಂತ ವಾಚ್ ಮಾಡ್ತಾನೇ ಇರಿ, ಮರೀಬೇಡಿ.
ಅಷ್ಟೇ ಅಲ್ಲ. ನಿಮ್ಮ ಕಚೇರಿ, ಅಪಾರ್ಟ್ ಮೆಂಟ್, ವಠಾರಗಳಲ್ಲಿ ಇದನ್ನ ದೊಡ್ಡ ಸುದ್ದಿ ಮಾಡಿ. ಬ್ರೇಕಿಂಗ್ ನ್ಯೂಸ್ ಇದ್ ಕಣ್ರೀ ಅಂತ ಡಂಗೂರ ಹೊಡೀರಿ. ನಿಮ್ಮ ಕಚೇರಿಯ Admin ಗೆ ಹೇಳಿ, ಸರ್, ಈ ಲಿಂಕನ್ನು All@ ..ಗೆ ಕಳಿಸಿ ಅಂತ ಮನವಿ ಮಾಡಿ. ಯಾರೂ ಬೇಡ ಅನ್ನಲ್ಲ. ಬೆಂಗಳೂರು ಕಸ ವಿರುದ್ಧದ ನಮ್ಮ ಹೋರಾಟಕ್ಕೆ ಲಕ್ಷಾಂತರ ಮನಸ್ಸುಗಳು ಬೇಕಾಗಿವೆ. ಅರ್ಜಿ ಹಾಕಿ!

ಲಕ್ಷ ಅನ್ನೋದು ಒಂದು ಸಂಖ್ಯೆ. ಈ ಅಂಕಿಯನ್ನು ಮೀರಿ ಬೆಳೆಯುವುದಕ್ಕೆ ಜನ ಬೇಕಷ್ಟೆ. ವಿಶ್ವಕಪ್ ಕ್ರಿಕೆಟ್ಟಿನಲ್ಲಿ ನಿಮಿಷಕ್ಕೊಂದು ರೆಕಾರ್ಡ್ ಆಗ್ತಿದೆ. ನಿಮಿಷಕ್ಕೊಂದು ದಾಖಲೆ ಪುಡಿಪುಡಿ ಆಗ್ತಿದೆ. ಹಾಗಿರುವಾಗ, ಬೆಂಗಳೂರಿನ ಆರೋಗ್ಯಕ್ಕಾಗಿ ನಾವು ಏನಾದರೊಂದು ದಾಖಲೆ ಬರೀಬೇಕು. ಬದಲಾವಣೆ ಸಾಧ್ಯವಿದೆ. Possible only if head and hand has an agreement! ಸ್ವಚ್ಛ ಬೆಂಗಳೂರಿಗೆ ಪಣತೊಟ್ಟಿರುವ ಬದ್ರಿನಾಥ್ ವಿಠಲ್ ಅವರ ಸ್ನೇಹಿತರಾಗಿ
ಇನ್ನೊಂದು ಮಾತು. ಬದಲಾವಣೆ ಬೇಕಾದರೆ ದೊಡ್ಡದೊಡ್ಡ ಮನುಷ್ಯರ, ಅಂದರೆ ಸೆಲೆಬ್ರಿಟಿಗಳ ಪ್ರೋತ್ಸಾಹವೂ ಅಗತ್ಯ. ಇನ್ಫಿ ಸಿಕ್ಕಾ, ವಿಪ್ರೊ ಪ್ರೇಂಜಿ, ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ವಿನಯ್ ಕುಮಾರ್ ಮತ್ತು ಚಲನಚಿತ್ರದ ದಿಗ್ಗಜರಾದ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ, ಕಾಮಿಡಿ ಗಣೇಶ ಮುಂತಾದವರಲ್ಲದೆ ಪತ್ರಕರ್ತರು, ಕವಿ-ಕಲಾವಿದರು, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ..ಎಲ್ರೂ ಬೇಕು. [ಒಣ ಕಸ ಮಾರಿ ಹಣ ಪಡೆಯಿರಿ]
ಬೆಂಗಳೂರು ಕಸದ ವಿರುದ್ಧ change.org ಘೋಷಿಸಿರುವ ಮೊದಲನೇ ಮಹಾಯುದ್ಧದಲ್ಲಿ ನೀವೂ ಸೈನಿಕರಾಗಿ. ನಮ್ಮ, ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆಗಳನ್ನು ಮುಖ್ಯಮಂತ್ರಿ, ಆರೋಗ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು ಮತ್ತು ಪೂಜ್ಯ ಮೇಯರ್ ಅವರಿಗೆ ಸಮರ್ಪಿಸಲಾಗುವುದು. ಆಮೇಲೆ ಏನು ಎಂಬ ನಿಮ್ಮ ಪ್ರಶ್ನೆ ಈಗ ಅಪ್ರಸ್ತುತ. ಸದ್ಯಕ್ಕೆ ನೀವು ಕುಡಿಯುವ ನೀರಲ್ಲಿ ಒಂದು ತೊಟ್ಟು ನೀರನ್ನು ಈ ಗಿಡಕ್ಕೆ ಹಾಕಿ! ಧನ್ಯವಾದ - ನಿಮ್ಮ ವಿಶ್ವಾಸಿ, ಶಾಮ್












Click it and Unblock the Notifications