ಚಿಕ್ಕಪೇಟೆ ಸ್ವತಂತ್ರ ಅಭ್ಯರ್ಥಿ ಶಾಝಿಯಾ ತರನ್ನುಮ್ ಆಸ್ತಿ ಮೌಲ್ಯ 1,622 ಕೋಟಿ!
ಬೆಂಗಳೂರು, ಏಪ್ರಿಲ್ 15: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಗಮನ ಸೆಳೆದಿರುವ ಅಭ್ಯರ್ಥಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಹಿಳೆ. ಈಕೆ ತನ್ನ ಆಸ್ತಿ 1,622 ಕೋಟಿ ರೂಪಾಯಿ ಎಂದು ನಾಮಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್‌ನ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ಪತ್ನಿ 37 ವರ್ಷದ ಶಾಝಿಯಾ ತರನ್ನುಮ್ ಅವರು ಚುನಾವಣಾ ಕಣಕ್ಕೆ ಧುಮುಕಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತಮ್ಮ ಆಸ್ತಿ 1,622 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಶಾಝಿಯಾ ತರನ್ನುಮ್ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಷೇರು ಹೂಡಿಕೆ, ಆಭರಣ ಸೇರಿದಂತೆ 40.59 ಲಕ್ಷ ರೂ.ಗಳ ಚರಾಸ್ತಿ ಇದೆ. ಪತಿಯ ಹೆಸರಿನಲ್ಲಿ ಸುಮಾರು 83.56 ಕೋಟಿ ರೂ.ಗಳ ಚರಾಸ್ತಿ ಇದೆ. ತನ್ನ ಬಳಿ 38.58 ಲಕ್ಷ ರೂ. ಮೌಲ್ಯದ 643 ಗ್ರಾಂ ಚಿನ್ನವಿದ್ದರೆ, ಪತಿ ಬಳಿ 91.08 ಲಕ್ಷ ರೂ. ಮೌಲ್ಯದ 1.51 ಕೆಜಿ ಚಿನ್ನವಿದೆ ಎಂದು ಘೋಷಿಸಿದ್ದಾರೆ.
ಯನ್ನ ಪತಿ ಬಳಿ ರೋಲ್ಸ್ ರಾಯ್ಸ್, ಫಾರ್ಚೂನರ್ ಕಾರುಗಳಿದ್ದು, ಇನ್ನೂ ಐದು ಕಾರುಗಳ ಖರೀದಿಗೆ 2.67 ಕೋಟಿ ರೂ. ಮುಂಗಡ ಹಣ ನೀಡಲಾಗಿದೆ. ಇವುಗಳಲ್ಲಿ ಬೆಂಜ್ (ಸ್ಕಾಟ್), ಫೋರ್ಡ್ ಎಂಡೆವರ್, ನಿಸ್ಸಾನ್, ರೋಲ್ಸ್ ರಾಯ್ಸ್, ಟೊಯೋಟಾ ವೆಲ್‌ಫೈರ್ ಕಾರುಗಳು ಇವೆ ಎಂದಿದ್ದಾರೆ. ಇನ್ನು, ತಮ್ಮ ಬಳಿ ಯಾವುದೇ ಸ್ಥಿರಾಸ್ತಿಯಿಲ್ಲ ಎಂದಿರುವ ಶಾಝಿಯಾ ತರನ್ನುಮ್, ಪತಿಯ ಹೆಸರಿನಲ್ಲಿ 3 ಕೃಷಿ ಜಮೀನು, 24 ಕೃಷಿಯೇತರ ಭೂಮಿ ಇದ್ದು 1,538.15 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳಿವೆ ಎಂದಿದ್ದಾರೆ.

ಕೆಜಿಎಫ್‌ನಲ್ಲಿ 7 ನೇ ತರಗತಿಯವರೆಗೆ ಓದಿರುವ ಗೃಹಿಣಿ ಶಾಝಿಯಾ ತರನ್ನುಮ್ "ನನ್ನ ಗಂಡನ ಸೂಚನೆಯ ಮೇರೆಗೆ ನಾನು ನನ್ನ ನಾಮಪತ್ರ ಸಲ್ಲಿಸಿದೆ. ನನ್ನ ಪತಿ ಮತ್ತು ನೂರಾರು ಬೆಂಬಲಿಗರು ಜೊತೆಗಿದ್ದರು" ಎಂದಿದ್ದಾರೆ. ಇದೇ ಕ್ಷೇತ್ರದಿಂದ ಕೆಜಿಎಫ್ ಬಾಬು ಸ್ಪರ್ಧಿಸಲು ಬಯಸುತ್ತಿರುವ ಕಾರಣ ಅವರಿಗೆ ಟಿಕೆಟ್ ಸಿಕ್ಕರೆ ಶಾಝಿಯಾ ತರನ್ನುಮ್ ಕಣದಿಂದ ಹಿಂದೆ ಸರಿಯುವ ಸಾಧ್ಯತೆಯಿತ್ತು.
ಕೆಜಿಎಫ್ ಬಾಬು ತಾವು ಜನರಿಗೆ ನೀಡಿದ್ದ ಹಲವಾರು ಭರವಸೆಗಳನ್ನು ಜಾರಿಗೊಳಿಸಿ ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿಯ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ್ದ ಅವರು, "ಕಾಂಗ್ರೆಸ್ ನನಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತದೆ ಎಂಬ ಭರವಸೆ ನನಗಿದೆ . ಆದರೆ ನಾನು ನನ್ನ ಪತ್ನಿಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಹೇಳಿದ್ದೆ. ನನಗೆ ಪಕ್ಷದ ಟಿಕೆಟ್ ಭರವಸೆ ನೀಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಗೌರವ ಸೂಚಕವಾಗಿ ನಾನು ನಾಮಪತ್ರ ಸಲ್ಲಿಸಲಿಲ್ಲ ಎಂದಿದ್ದರು.
ಪತಿ ಪತ್ನಿಯ ಒಟ್ಟು ಆಸ್ತಿ ಮೌಲ್ಯವು 2018 ರ ಚುನಾವಣೆಯ ಸಮಯದಲ್ಲಿ ಅವರು ಘೋಷಿಸಿದ್ದಕ್ಕಿಂತ 121 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. ''ಕಳೆದ ಬಾರಿ ನನ್ನ ಆಸ್ತಿ ಒಟ್ಟು 1,743 ಕೋಟಿ ರೂ.ಗಳಷ್ಟಿತ್ತು.ಈಗ ಅದು 1,622 ಕೋಟಿ ರೂ.ಗೆ ಇಳಿದಿದೆ. ನಾನು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕೆಲವು ಆಸ್ತಿಗಳನ್ನು ಮಾರಾಟ ಮಾಡಿದ್ದೇನೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
23,000 ಮನೆಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್, 3,000 ಮನೆಗಳ ನಿರ್ಮಾಣ, 60,000 ವಿದ್ಯಾರ್ಥಿವೇತನವನ್ನು ನೀಡುವುದಾಗಿ ಬಾಬು ಭರವಸೆ ನೀಡಿದ್ದಾರೆ. 400 ಮನೆಗಳ ನಿರ್ಮಾಣ ಕಾಮಗಾರಿ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳಿಗೆ ತಿಂಗಳಿಗೆ 3. 5 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು, ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನನಗೆ ಟಿಕೆಟ್ ಭರವಸೆ ನೀಡಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದರೆ ಚಿಕ್ಕಪೇಟೆಯ ಜನರು, ಕಾರ್ಪೊರೇಟರ್‌ಗಳು ಮತ್ತು ಬೆಂಬಲಿಗರೊಂದಿಗೆ ಸಮಾಲೋಚಿಸಿ ಟಿಕೆಟ್ ನೀಡುವ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಬಾಬು ಹೇಳಿದ್ದರು. ಮಾತಿನಂತೆ ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಣೆ ಮಾಡಿಲ್ಲ.
ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆಜಿಎಫ್ ಬಾಬು ಬದಲಿಗೆ ಕಾಂಗ್ರೆಸ್ ಆರ್.ವಿ.ದೇವರಾಜ್ ಅವರಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ. ಈಗ ಮುಂದಿನ ನಡೆ ಏನು ಎಂಬುದನ್ನು ಅವರೇ ತಿಳಿಸಬೇಕಿದೆ. ಮೊದಲೇ ಟಿಕೆಟ್ ನೀಡುವ ಪಕ್ಷಕ್ಕೆ ಸೇರುತ್ತೇನೆ ಎಂದಿದ್ದ ಅವರ ನಿರ್ಧಾರ ಏನಾಗಲಿದೆ ಎಂಬುದು ಇನ್ನೇರಡು ದಿನಗಳಲ್ಲಿ ತಿಳಿಯಬಹುದು.












Click it and Unblock the Notifications