ಕುಮಾರಸ್ವಾಮಿ ಕೂಡ ಆಂಧ್ರಕ್ಕೆ ಶಿಫ್ಟ್ ಆದ್ರೆ ಕರ್ನಾಟಕ ಇನ್ನೂ ಚೆನ್ನಾಗಿರುತ್ತೆ: ನಟ ಚೇತನ್
ಇತ್ತೀಚೆಗೆ ಬೆಂಗಳೂರಿನ ಮೂಲಸೌಕರ್ಯ ಕುರಿತು ಐಟಿ ದಿಗ್ಗಜರು ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅತ್ತ ಬೆಂಗಳೂರನ್ನು ಸದಾ ಅಣಕಿಸುತ್ತಿರುವ ಆಂಧ್ರ ಸರ್ಕಾರಕ್ಕೆ ಭಾರೀ ಹೂಡಿಕೆ ಗೂಗಲ್ ಐಟಿ ಹಬ್ ಪಾಲಾಗಿತ್ತು. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇನ್ಫೋಸಿಸ್ ಕೂಡ ಆಂಧ್ರಪ್ರದೇಶಕ್ಕೆ ಹೋದರೆ ಏನು ಗತಿ? ಎಂದು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ನಟ ಚೇತನ್ ಅಹಿಂಸಾ ಟಾಂಗ್ ನೀಡಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಹೇಳ್ತಾರೆ 'ಇನ್ಫೋಸಿಸ್ ಆಂಧ್ರಪ್ರದೇಶಕ್ಕೆ ಹೋಗಿದ್ರೆ ಏನ್ ಗತಿ'. ಇನ್ಫೋಸಿಸ್ ಆಂಧ್ರಕ್ಕೆ ಹೋಗಿದ್ರೆ, ಕರ್ನಾಟಕಕ್ಕೆ ನಿಜವಾಗಿ ಒಳ್ಳೆಯದೇ ಆಗ್ತಿತ್ತು. ಸ್ಥಳೀಯರಿಗೆ ಉದ್ಯೋಗ ಸಿಗ್ತಿತ್ತು, ಭೂಮಿ ಸರಿಯಾಗಿ ಉಪಯೋಗ ಆಗ್ತಿತ್ತು. ನಮ್ಮ ಸಾಂಸ್ಕೃತಿಕ ಬೆಲೆ, ಮೌಲ್ಯ ಕಾಪಾಡಿಕೊಳ್ಳಲಾಗುತ್ತಿತ್ತು. ಬೆಂಗಳೂರು ಇಷ್ಟು ಜಾಮ್ ಆಗೋದು ಕಡಿಮೆಯಾಗ್ತಿತ್ತು. ಬೇರೆ ಜಿಲ್ಲೆಗಳಿಗೂ ಅಭಿವೃದ್ಧಿ ಸಿಗ್ತಿತ್ತು. ಇತರೆ ಕ್ಷೇತ್ರಗಳಿಗೂ ಉತ್ತೇಜನ ಸಿಗ್ತಿತ್ತು. ಇನ್ಫೋಸಿಸ್ ಜೊತೆಗೆ ಹೆಚ್‌ಡಿಕೆ ಹಾಗೂ ಅವರ ಕುಟುಂಬವೂ ಆಂಧ್ರಕ್ಕೆ ಶಿಫ್ಟ್ ಆದ್ರೆ, ಕರ್ನಾಟಕ ಇನ್ನೂ ಚೆನ್ನಾಗಿರೋದು ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ರಸ್ತೆ ಗುಂಡಿಗಳನ್ನ ಮುಚ್ಚುವ ಬದಲು, ಉದ್ಯಮಿ ಕಿರಣ್ ಮಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಟೀಕೆಗಳನ್ನ ನಿಲ್ಲಿಸಿ, ಗುಂಡಿಗಳನ್ನು ಮುಚ್ಚಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಬೆಂಗಳೂರಿನ ರಸ್ತೆ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಕಿರಣ್ ಮಜುಂದಾರ್ ಶಾ ಪರ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದರು. ಉದ್ಯಮಿ ಕಿರಣ್ ಮಜುಂದಾರ್ ಶಾ ಮಾತ್ರವಲ್ಲ, ಬೆಂಗಳೂರಿನ ರಸ್ತೆಗಳ ತುಂಬ ಗುಂಡಿಗಳೇ ಇವೆ ಎಂದು ಮಾಧ್ಯಮಗಳು ಪ್ರತಿದಿನ ವರದಿ ಮಾಡುತ್ತಿವೆ, ಅದೂ ಸುಳ್ಳೇ? ಎಂದು ಕೇಳಿದ್ದರು.
ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಹೊಸ ಕಾಮಗಾರಿ ಮಾಡುತ್ತಿಲ್ಲ. ನನ್ನ ಅವಧಿಯಲ್ಲಿ ಮಂಜೂರಾತಿ ನೀಡಿದ ಕೆಲಸಗಳನ್ನೇ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಉದ್ಯಮಗಳಿಗೆ ಕೊಡುವ ಸೌಲಭ್ಯ ಮತ್ತು ವಿನಾಯಿತಿಗಳ ಬಗ್ಗೆ ಹೇಳಿದ್ರೆ ನೀವು ಅಲ್ಲಿಗೇ ಹೋಗಿ ಅಂತಾರೆ. ಸರ್ಕಾರ ಹೀಗೆ ಹೇಳುತ್ತಿದ್ರೆ ರಾಜ್ಯಕ್ಕೆ ಯಾವ ಉದ್ಯಮ ಬರುತ್ತದೆ? ಎಂದು ಕೇಳಿದ್ದಾರೆ. ರಸ್ತೆಗುಂಡಿಗಳಿಂದ ಜನರಿಗೆ ತುಂಬಾ ಸಮಸ್ಯೆ ಆಗಿದೆ. ನಾನು ಸಿಎಂ ಆಗಿದ್ದ ಎರಡೂ ಅವಧಿಯಲ್ಲಿ ರಸ್ತೆಗುಂಡಿಗಳ ಬಗ್ಗೆ ಯಾವ ಉದ್ಯಮಿಯೂ ಟೀಕೆ ಮಾಡಲಿಲ್ಲ ಎಂದು ಬೆನ್ನುತಟ್ಟಿಕೊಂಡಿದ್ದರು.
ನನ್ನ ಅವಧಿಯಲ್ಲಿ 59 ರಸ್ತೆಗಳ ವಿಸ್ತರಣೆಗೆ ಮಂಜೂರಾತಿ ನೀಡಲಾಗಿತ್ತು. ಐದಾರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಈಗಿನ ಸರ್ಕಾರ ವರ್ಷಗಳು ಕಳೆದರೂ ಕಾಮಗಾರಿ ಮುಗಿಸಿಲ್ಲ. ಕೆಲಸ ಮಾಡಲು ಇವರಿಗೆ ಇರುವ ಸಮಸ್ಯೆಯಾದರೂ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈಗ ಪ್ರತಿದಿನವೂ ಆರ್‌ಎಸ್‌ಎಸ್ ಜಪ ಮಾಡುತ್ತಿದೆ. ರಾಜ್ಯದಲ್ಲಿ ಎಷ್ಟೆಲ್ಲ ಸಮಸ್ಯೆಗಳಿವೆ? ಅವುಗಳನ್ನ ಪರಿಹರಿಸುವುದು ಬಿಟ್ಟು ಈಗ ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡುವ ಸಂದರ್ಭವೇ? ಒಂದು ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದರೆ ಏನು ಉಪಯೋಗ? ಎಂದು ತಿರುಗೇಟು ನೀಡಿದ್ದರು.












Click it and Unblock the Notifications