ರಣರಂಗವಾದ ವಿಧಾನಸೌಧ: ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ಜಟಾ-ಪಟಿ
ಬೆಂಗಳೂರು, ಜುಲೈ 10: ವಿಧಾನಸೌಧ ಬಹುತೇಕ ರಣರಂಗವಾಗಿ ಮಾರ್ಪಾಡಾಗಿದೆ. ರಾಜೀನಾಮೆ ನೀಡಲು ಬಂದಿದ್ದ ಸುಧಾಕರ್ ಅವರನ್ನು ಸುತ್ತುವರೆದ ಕಾಂಗ್ರೆಸ್ ಶಾಸಕರು ಅವರನ್ನು ಬಲವಂತದಿಂದ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಸುಧಾಕರ್ ಅವರನ್ನು ಸುತ್ತವರೆದ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು, ಸುಧಾಕರ್ ಅವರನ್ನು ಎಳೆದಾಡಿದ್ದು ವಿಡಿಯೋಗಳಲ್ಲಿ ದಾಖಲಾಗಿದೆ, ಸುಧಾಕರ್ ಅವರನ್ನು ಬೈದಿದ್ದಾರೆ. ಆ ನಂತರ ಅವರನ್ನು ಸಚಿವ ಕೆ.ಜೆ.ಜಾರ್ಜ್ ಅವರ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಅಷ್ಟರಲ್ಲಿ ಬಿಜೆಪಿ ಶಾಸಕರು ಸಹ ವಿಧಾನಸೌಧಕ್ಕೆ ಪ್ರವೇಶಿಸಿ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಷ್ಟರಲ್ಲಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಬಂದು, ಸುಧಾಕರ್ ಅವರನ್ನು ಕೊಠಡಿಯ ಕಡೆಗೆ ಹೊರಟಿದ್ದಾಗ ಅವರನ್ನು ಬಿಜೆಪಿಯ ಶಾಸಕರು ಅಡ್ಡಗಟ್ಟಿದ್ದಾರೆ.

ಬಿಜೆಪಿಯ ಶಾಸಕರು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ವಿಧಾನಸೌಧದ ಒಳಗೆ ಕೂಗಿದ್ದಾರೆ. ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಸಿದ್ದರಾಮಯ್ಯ ಮಧ್ಯೆ ವಾಗ್ವಾದವೂ ಈ ಕ್ಷಣದಲ್ಲಿ ನಡೆದಿದೆ. ವಿಧಾನಸೌಧದ ಹೊರಗೆ ಸಹ ಕಾಂಗ್ರೆಸ್ ಶಾಸಕರು-ಬಿಜೆಪಿ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಸಿದೆ.

ಪರಿಸ್ಥಿತಿ ಗಂಭೀರತೆ ಅರಿತ ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ, ಜೊತೆಗೆ ಪೊಲೀಸ್ ಫೋರ್ಸ್ ಅನ್ನು ಕರೆಸಿಕೊಂಡಿದ್ದಾರೆ.












Click it and Unblock the Notifications