ಅಫ್ಘಾನಿಸ್ತಾನದ ಮಕ್ಕಳ ಕೈಯಲ್ಲಿ ಚನ್ನಪಟ್ಟಣದ ಆಟಿಕೆಗಳು: ಇದು ಹೇಗೆ ಸಾಧ್ಯ..? ಇಲ್ಲಿದೆ ಅಸಲಿ ವಿಚಾರ
ಬೆಂಗಳೂರು ಡಿಸೆಂಬರ್ 15: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ತಯಾರಾಗುವ ಗೊಂಬೆಗಳು ಹಾಗೂ ಆಟಿಕೆಗಳು ವಿದೇಶದಲ್ಲೂ ಜನಪ್ರಿಯತೆ ಪಡೆಯುತ್ತಿದೆ. ಚನ್ನಪಟ್ಟಣದ ಆಟಿಕೆಗಳು ಇದೀಗ ಅಫ್ಘಾನಿಸ್ತಾನದಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿವೆ. ಅಫ್ಘಾನಿಸ್ತಾನದ ಮಕ್ಕಳಿಗೆ ಆಟವಾಡಲು ಚನ್ನಪಟ್ಟಣದಲ್ಲಿ ತಯಾರಾದ ಆಟಿಕೆಗಳನ್ನು ನೀಡಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇತರ ದೇಶಗಳೊಂದಿಗೆ ಸೌಹಾರ್ದ ಸೂಚಕವಾಗಿ ಕೆಲವು ಸಮಯದ ಹಿಂದೆ ಅಫ್ಘಾನಿಸ್ತಾನಕ್ಕೆ ಚನ್ನಪಟ್ಟಣದಲ್ಲಿ ಕೆಲವು ಆಟಿಕೆಗಳನ್ನು ಕಳುಹಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಈ ಸಾಂಪ್ರದಾಯಿಕ ಕರಕುಶಲತೆಯು ಭೌಗೋಳಿಕ ಸೂಚಕ (Geographical Indication) ಅನ್ನು ಪಡೆದುಕೊಂಡಿದೆ.

ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (UNODC) ಅಫ್ಘಾನಿಸ್ತಾನದ ಪೋಸ್ಟ್ ಪ್ರಕಾರ, 'ಅಫ್ಘಾನಿಸ್ತಾನ ದೇಶದಲ್ಲಿ ನೂರಾರು ಮಕ್ಕಳು ಮಾದಕ ವ್ಯಸನಕ್ಕೆ ಒಳಪಡುತ್ತಿದ್ದಾರೆ. ಹೀಗಾಗಿ 12 ವರ್ಷದೊಳಗಿನ ಮಕ್ಕಳಿಗೆ ಶೈಕ್ಷಣಿಕ ಮತ್ತು ಮನರಂಜನಾ ಆಟಿಕೆಗಳತ್ತ ಹೆಚ್ಚಿನ ಗಮನ ಹರಿಸುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಕೊಡುಗೆಯಾಗಿ ನೀಡಿದ ಆಟಿಕೆಗಳು ಅಫ್ಘಾನಿಸ್ತಾನದ ಅನೇಕ ಮಕ್ಕಳನ್ನು ತಲುಪಿವೆ ಎಂದು ಯುಎನ್‌ಒಡಿಸಿ ಹೇಳಿದೆ.
ಈ ಬಗ್ಗೆ ಗ್ರಾಮೀಣ ಜೀವನೋಪಾಯ ಮಿಷನ್ ನಿರ್ದೇಶಕಿ ಶ್ರೀವಿದ್ಯಾ ಪಿಐ ಮಾತನಾಡಿದ್ದು, "ಕೆಲ ಸಮಯದ ಹಿಂದೆ ದಂತ ಮತ್ತು ಮರದಿಂದ ಮಾಡಿದ 500ಕ್ಕೂ ಹೆಚ್ಚು ಆಟಿಕೆಗಳನ್ನು ಅಫ್ಘಾನಿಸ್ತಾನದ ಮಕ್ಕಳಿಗೆ ಕಳುಹಿಸಲಾಗಿದೆ. ವಿಶೇಷವಾಗಿ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ಆಟಿಕೆಗಳನ್ನು ಕಳುಹಿಸಲಾಗಿತ್ತು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಾಯದಿಂದ ಚನ್ನಪಟ್ಟಣದ ಆಟಿಕೆಗಳು ಅಫ್ಘಾನಿಸ್ತಾನದ ಮಕ್ಕಳವರೆಗೆ ತಲುಪಿದೆ" ಎಂದು ಖುಷಿ ಪಟ್ಟರು.
" ಚನ್ನಪಟ್ಟಣದಲ್ಲಿ ತಯಾರಾಗುವ ಆಟಿಕೆಗಳಲ್ಲಿ ರಾಸಾಯನಿಕ ಬಣ್ಣ ಬಳಸದಿರುವುದರಿಂದ ಮತ್ತು ಚೂಪಾದ ಅಂಚುಗಳಿಲ್ಲದೆ ಇರುವುದರಿಂದ ಮಕ್ಕಳ ಆಟಕ್ಕೆ ಸೂಕ್ತವಾಗಿದೆ. ಇವುಗಳು ಸಂಪೂರ್ಣವಾಗಿ ಮಕ್ಕಳಿಗೆ ಸುರಕ್ಷಿತ. ಹೀಗಾಗಿ ಈ ಅಂಶಗಳನ್ನು ಪರಿಗಣಿಸಿ ಆಯ್ಕೆ ಮಾಡಿದ ಆಟಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ" ಎಂದರು.

ಇನ್ನು "ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣದ ಆಟಿಕೆ ತಯಾರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಉದ್ಯಮವಾಗಿದೆ. ಇಲ್ಲಿ ನಾವು ಆನ್‌ಲೈನ್, ಆಫ್‌ಲೈನ್ ಮತ್ತು ಮಾರ್ಕೆಟಿಂಗ್ ಹಾಗೂ ಇತರ ಮಾರ್ಗಗಳ ಮೂಲಕ ಸ್ಥಳೀಯವಾಗಿ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತಿದೆ. ಸ್ಥಳೀಯ ಕುಶಲಕರ್ಮಿಗಳು ತಯಾರಿಸುವ ಆಟಿಕೆಗಳನ್ನು ಖರೀದಿಸಲಾಗುತ್ತಿದೆ. ಹಾಗೂ ಇಲ್ಲಿ ತಯಾರಾಗುವ ಆಟಿಕೆಗಳು ಉತ್ತಮ ಗುಣಮಟ್ಟದ್ದಾಗಿದ್ದು, ಬೇರೆ ದೇಶಗಳಿಗೂ ರವಾನೆ ಮಾಡಲಾಗುತ್ತಿದೆ" ಎಂದು ಶ್ರೀವಿದ್ಯಾ ಹೇಳಿದರು.












Click it and Unblock the Notifications