Bengaluru Waste: ಗಾರ್ಬೇಜ್ ಕರ ಹೇರಿಕೆ ಬೆನ್ನಲ್ಲೆ ಬೆಂಗಳೂರಿಗೆ ಬಂದ ಕೇಂದ್ರ ನಿರ್ದೇಶಕರು
ಬೆಂಗಳೂರು, ಏಪ್ರಿಲ್ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇತ್ತೀಚೆಗೆ ಗಾರ್ಬೇಜ್ ಸೆಸ್ ಹೇರಲಾಗಿದೆ. ಇದರ ಬೆನ್ನಲ್ಲೆ ನಗರದ ಘನತ್ಯಾಜ್ಯ ನಿರ್ವಹಣೆಗೆ ಮಹತ್ವದ ಕ್ರಮ ಕೈಗೊಳ್ಳಳಾಗುತ್ತಿದೆ. 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಕರಣಾ ಘಟಕಕ್ಕೆ ಹಾಗೂ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಕೇಂದ್ರ ಸಚಿವಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಚ ಭಾರತ್ ಮಿಷನ್ (ನಗರ-SBM(U) -2.O ನಿರ್ದೇಶಕರಾದ ಬಿನಯ್ ಝಾ ರವರು ಶನಿವಾರ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಚೇರಿ ಭೇಟಿ ನೀಡಿದರು. ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಸಮಗ್ರ ಮಾಹಿತಿ ಪಡೆದುಕೊಂಡರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ಹಣಾ ಅಧಿಕಾರಿಯಾದ ಡಾ. ಕೆ ಹರೀಶ್ ಕುಮಾರ್ ರವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಯಾವ ರೀತಿ ಮಾಡಲಾಗುತ್ತಿದೆ, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೂಪಿಸಿರುವ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ವೀಕ್ಷಿಸಿದರು. ನಂತರ ಘಟಕಗಳಿಗೆ ಭೇಟಿ ನೀಡಿ ಖದ್ದು ಭೇಟಿ ನೀಡಿದರು. ಇದರ ಬೆನ್ನಲ್ಲೆ ಅಧಿಕಾರಿಗಳಿಗೆ ಮಹತ್ವದ ಸಲಹೆ ಸೂಚನೆ ನೀಡಲಾಗಿದೆ.
6,500 ಮೆಟ್ರಿಕ್ ತ್ಯಾಜ್ಯ ಉತ್ಪತ್ತಿ
ಬೆಂಗಳೂರಲ್ಲಿ ನಿತ್ಯ 6,500 ಮೆಟ್ರಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಪ್ರತಿ ಮನೆ-ಮನೆಗೆ ತೆರಳಿ ಆಟೋ ಟಿಪ್ಪರ್ ಗಳ ಮೂಲಕ ಹಸಿ, ಒಣ ಹಾಗೂ ನೈರ್ಮಲ್ಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ಗಳಿಗೆ ಆರ್.ಎಫ್.ಐ.ಡಿ ಅಳವಡಿಸಲಾಗಿದೆ. ಮಾರ್ಷಲ್ ಗಳು ಪ್ರತಿನಿತ್ಯ ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ಪಡೆಯಲಿದ್ದಾರೆ ಎಂದು ಹೇಳಿದರು.

ನಗರದಲ್ಲಿ ರಸ್ತೆ ಬದಿ ತ್ಯಾಜ್ಯ ಬಿಸಾಡುವವರ ಮೇಲೆ ಮಾರ್ಷಲ್ ಗಳು ದಂಡ ವಿಧಿಸಲಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗುವ ವೇಳೆ ರಸ್ತೆ ಬದಿ ಕಸ ಬಿಸಾಡುವವರನ್ನು ಹಿಡಿದು ದಂಡ ವಿಧಿಸಿ ಮತ್ತೆ ರಸ್ತೆ ಬದಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಿದ್ದಾರೆ. ಅದಲ್ಲದೆ ಮನೆ-ಮನೆ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳಿಗೆ ಕಸವನ್ನು ನೀಡಲು ಅರಿವು ಮೂಡಿಸುತ್ತಾರೆ ಎಂದು ತಿಳಿಸಿದರು.
ಇದಲ್ಲದೆ ಘನತ್ಯಾಜ್ಯ ನಿರ್ವಣೆಯ ಮೇಲ್ವಿಚಾರಣೆಗಾಗಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ನಿರ್ಮಾಣ, ಕಸ ವಿಲೇವಾರಿಯ ಮೇಲ್ವಿಚಾರಣೆಗಾಗಿ ತಂತ್ರಾಂಶಗಳ ಅಭಿವೃದ್ಧಿಪಡಿಸುತ್ತಿರುವ ಬಗ್ಗೆಯೂ ಮಾಹಿತಿ ನೀಡಲಾಯಿತು.
ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ
ಸ್ವಚ್ಛ ಭಾರತ ಅಭಿಯಾನದ ಧ್ಯೆಯೋದ್ದೆಶಗಳಲ್ಲೊಂದಾದ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಯ ಕುರಿತು ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆಯುವ ಸಲುವಾಗಿ ಭೂಭರ್ತಿ ಘಟಕಕ್ಕೆ ಮತ್ತು ಕೆ.ಸಿ.ಡಿ.ಸಿ ಸಂಸ್ಕರಣಾ ಘಟಕಗಳನ್ನು ಪರಿಶೀಲಿಸಲಾಯಿತು.
ಭೂಭರ್ತಿ ಘಟಕದಲ್ಲಿ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿರುವ ಮಿಶ್ರ ತ್ಯಾಜ್ಯ ವಿಲೇವಾರಿಯನ್ನು ಗಮನಿಸಿ ಹಲವಾರು ಸಲಹೆಗಳನ್ನು ನೀಡಿದರು. ಭೂಭರ್ತಿ ಘಟಕದಲ್ಲಿ ವಿಲೇಗೊಳಿಸುತ್ತಿರುವ ಮಿಶ್ರ ತ್ಯಾಜ್ಯದ ಪ್ರಮಾಣವನ್ನು ಕುಂದಿಸಲು ಮೂಲದಲ್ಲಿಯೇ ತ್ಯಾಜ್ಯದ ವಿಂಗಡಣೆಯ ಪ್ರತಿಶತ ವೃದ್ಧಿಸಲು ಸಾರ್ವಜನಿಕರಿಗೆ ಫಲಿತಾಂಶ ಆಧಾರಿತ ಹೆಚ್ಚೆಚ್ಚು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕೈಗೊಳ್ಳಲು ಸಲಹೆಯನ್ನು ನೀಡಲಾಯಿತು.
ನಿರ್ಮಾಣ ಹಂತದ ಸಂಸ್ಕರಣ ಘಟಕ ಪರಿಶೀಲನೆ
ಪೂರ್ಣ ಪ್ರಮಾಣದಲ್ಲಿ ಅಂದಾಜು ರೂ.150 ಕೋಟಿಗಳ ಖಾಸಗಿ ವೆಚ್ಚದಲ್ಲಿ ಮೆ. ಮುಕ್ಕಾ ಪ್ರೋಟಿನ್ಸ್ ಲಿಮಿಟೆಡ್ ವತಿಯಿಂದ ಅಂತರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ತಂತ್ರಜ್ಞಾನದ ಹಾಗೂ ಕಾರ್ಯಾಚರಣೆಯ ವಿವರ ಪಡೆದರು.
ಸಂಸ್ಕರಣಾ ಘಟಕದಲ್ಲಿ ಅಂದಾಜು 1,000 ಮೆ.ಟನ್ ಸಾಮರ್ಥ್ಯದ ಸಂಸ್ಕರಣ ಘಟಕವೊಂದು ಬೆಂಗಳೂರು ನಗರಕ್ಕೆ ಅಗತ್ಯವಿರುವ ಕುರಿತು ವಿಶ್ಲೇಷಿಸಿ ನಗರಕ್ಕೆ ಕೊಡುಗೆಯನ್ನು ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆಯ ನಿರ್ಧಾರ ಮತ್ತು ಸಾಹಸವನ್ನು ಶ್ಲಾಘಿಸಿದರು.
ಅಂತಾರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ಬೃಹತ್ ಸಾಮರ್ಥ್ಯದ ಸಂಸ್ಕರಣ ಘಟಕ ನಿರ್ಮಿಸುತ್ತಿರುವ ಕುರಿತು ಪ್ರಸ್ತಾವನೆಯನ್ನು ಕ್ರಮಾನುಗತವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯ ಸ್ವಚ್ಛ ಭಾರತ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಸಮಿತಿಗೆ ಸಲ್ಲಿಸಬೇಕಿದೆ. ಒಂದು ವೇಳೆ ಸಲ್ಲಿಕೆ ಆದಲ್ಲಿ ಸದರಿ ಮೆ. ಮುಕ್ಕಾ ಪ್ರೋಟಿನ್ಸ್ ಲಿಮಿಟೆಡ್ ನ ಭಾರಿ ಪ್ರಮಾಣದ ತಂತ್ರಜ್ಞಾನವನ್ನು ಅನುಮೋದಿಸಿ ರಾಜ್ಯ ಹಾಗೂ ದೇಶದ ಇತರೆ ಮಹಾನಗರ ಪಾಲಿಕೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಿ ಮಾರ್ಗಸೂಚಿ ಹೊರಡಿಸಲಾಗವುದು. ಈ ಕುರಿತು ಅವರು ಭರವಸೆ ನೀಡಿದರು.












Click it and Unblock the Notifications