Bengaluru Second Airport: ಎರಡನೇ ವಿಮಾನ ನಿಲ್ದಾಣ ನಿರ್ಮಾಣ; ಗುಡ್ ನ್ಯೂಸ್ ಕೊಟ್ಟ ಎಂ ಬಿ ಪಾಟೀಲ್
ಬೆಂಗಳೂರು, ಸೆಪ್ಟೆಂಬರ್ 02: ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸದ್ಯ ಭಾರೀ ಚರ್ಚೆಯಲ್ಲಿದೆ. ಹೊಸ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ನೆರೆ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಮುಸುಕಿನ ಗುದ್ಧಾಟ ನಡೆಯುತ್ತಲೇ ಇದ್ದು, ಸ್ಥಳ ಫೈನಲ್ ಮಾಡುವುದಕ್ಕಾಗಿ ಎರಡು ರಾಜ್ಯಗಳ ಮಧ್ಯೆ ಪೈಪೋಟಿ ಶುರುವಾಗಿತ್ತು. ಕೊನೆಗೂ ತಮಿಳುನಾಡು ಹೊಸ ಏರ್‌ಪೋರ್ಟ್ ಘೋಷಣೆ ಮಾಡಿದ್ದು, ಇದೀಗ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಚಿವ ಎಂ ಬಿ ಪಾಟೀಲ್ ಪಣತೊಟ್ಟಿದ್ದಾರೆ.
ಮಿಳುನಾಡು ವಿಮಾನ ನಿಲ್ದಾಣ ನಿರ್ಮಿಸಿದರೂ, ಕರ್ನಾಟಕದ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎಂ ಬಿ ಪಾಟೀಲ್ ಅವರು ಹೇಳಿದ್ದು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಯಾಗುವುದು ಖಚಿತವಾಗಿದೆ. 2033ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಕನಕಪುರ ರಸ್ತೆ ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೂ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಸ್ಥಳ ಆಯ್ಕೆ ಕುರಿತು ಕರ್ನಾಟಕ ಕೈಗಾರಿಕೆ ಹಾಗೂ ಮೂಲಸೌಕರ್ಯಗಳ ಸಚಿವ ಎಂ ಬಿ ಪಾಟೀಲ್ ಅವರು ಮಾತನಾಡಿ, ಯಾರೇ ಎಷ್ಟೇ ಅಡ್ಡಿಯಾದರೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಎರಡನೇ ವಿಮಾನ ನಿಲ್ದಾಣ 2033 ಕ್ಕೆ ಆರಂಭ ನಿಶ್ಚಿತವಾಗಿದ್ದು, ಶೀಘ್ರದಲ್ಲಿಯೇ ಸ್ಥಳ ಅಂತಿಮಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಮುಂಬರುವ ವರ್ಷಗಳಲ್ಲಿ ಆ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಐಟಿ ಹಬ್ ಆಗಿದ್ದು, ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಪ್ರಯಾಣಿಕರ ನಿರ್ವಹಣೆಗೆ ಎರಡನೇ ವಿಮಾನ ನಿಲ್ದಾಣವು ತೀರಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯಪ್ರವೃತವಾಗಿದೆ. ನಮ್ಮ ಯೋಜನೆಯಲ್ಲಿ ಯಾವುದೇ ಬದಲಾವಣೆ ತರುವ ಉದ್ದೇಶವಿಲ್ಲ. ನಾವು ಈಗಿನಿಂದಲೇ ತಯಾರಿಯನ್ನು ಪ್ರಾರಂಭಿಸಿದರೆ, ಎರಡನೇ ವಿಮಾನ ನಿಲ್ದಾಣವು 2030ರ ವೇಳೆಗೆ ಸಿದ್ದಗೊಳ್ಳಲಿದೆ. 2033 ರಿಂದ ಕಾರ್ಯಾಚರಣೆಯು ಆರಂಭವಾಗಲಿದೆ. ಮುಂದಿನ ವಾರಗಳಲ್ಲಿ ಕೇಂದ್ರ ಸರ್ಕಾರವು ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
ತಮಿಳುನಾಡು ಸರ್ಕಾರ ಹೊಸೂರು ಬಳಿ, ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಿದೆ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯು ಸರಿಯಾದ ಹಾದಿಯಲ್ಲಿದೆ. 2033ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ. ಇನ್ನೂ ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧಿಕಾರಗಳ ತಂಡವು, ರಾಜ್ಯ ಸರ್ಕಾರವು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದ ಮೂರು ಸ್ಥಳಗಳನ್ನು ಪರಿಶೀಲಿಸಿತ್ತು. ಈ ಯೋಜನೆಗಾಗಿ ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪ 4,800 ಹಾಗೂ 5,000 ಎಕರೆ, ನೆಲಮಂಗಲದ ಕುಣಿಗಲ್ ರಸ್ತೆಯ ಹತ್ತಿರ 5,200 ಎಕರೆ ಜಾಗವನ್ನು ಗುರುತಿಸಲಾಗಿತ್ತು.
ತಮಿಳು ನಾಡು ಸರ್ಕಾರ ಹೊಸ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇನ್ನೂ ಎಎಐ ಪ್ರಕಾರ, ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶವಿಲ್ಲ. ಇದರ ನಡುವೆ ಮತ್ತೊಂದು ವಿಮಾನ ನಿಲ್ದಾಣವನ್ನು ಆರಂಭ ಮಾಡಿದರೆ, ಎರಡು ವಿಮಾನ ನಿಲ್ದಾಣಗಳ ನಡುವೆ ಏರ್ ಟ್ರಾಫಿಕ್ ತೊಂದರೆ ಉಂಟಾಗುತ್ತದೆ.












Click it and Unblock the Notifications