ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಕೇಂದ್ರ ನಗರ ಪಾಲಿಕೆಯಿಂದ ಮಹತ್ವದ ಬದಲಾವಣೆ!
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ಭಾಗದಲ್ಲಿ ಸ್ವಚ್ಛತೆ ಕೊರತೆ ಇದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಭರ್ಜರಿಯಾಗಿ ನಡೆದಿದೆ. ಕೇಂದ್ರ ನಗರಪಾಲಿಕೆಯ ಆಯುಕ್ತರು ಏಫ್ರಾನ್ ತೊಟ್ಟು, ಕೈ ಗವಸು - ಮುಖಕ್ಕೆ ಮಾಸ್ಕ್ ಧರಿಸಿ, ಪೊರಕೆ ಹಿಡಿದು ಸ್ವಚ್ಛವಾಗಿ ಗುಡಿಸಿ, ಗೋಡೆ ಮೇಲೆ ಅಂಟಿಸಿದ್ದ ಬಿತ್ತಿ ಪತ್ರಗಳನ್ನು ತೆರವುಗೊಳಿಸಿ, ಕೈಯಲ್ಲಿ ಪೇಂಟ್ ಬ್ರಶ್ ಹಿಡಿದು ಶೀಟ್‌ಗೆ ಬಣ್ಣ ಬಳಿದು ಆಕರ್ಷಕ ಸ್ಥಳವನ್ನಾಗಿಸಿ, ಎಲ್ಲರೊಟ್ಟಿಗೆ ಪಾದಚಾರಿ ನೆಲದ ಮೇಲೆ ಕುಳಿತು ತಿಂಡಿ ತಿಂದಿದ್ದಾರೆ. ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಇಂದು ಮೆಜೆಸ್ಟಿಕ್ ಬಳಿಯ ಪಾದಚಾರಿ ಮಾರ್ಗವನ್ನು ಸ್ವಯಂಸೇವಕರ ಸಹಕಾರದೊಂದಿಗೆ ಸೇರಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗಿಯಾದರು.
ನಗರದ ಪಾದಚಾರಿ ಮಾರ್ಗಗಳನ್ನು ಸ್ವಚ್ಛ-ಸುಂದರಗೊಳಿಸಿ ಸಾರ್ವಜನಿಕರಿಗೆ ಪಾದಚಾರಿ ಸ್ನೇಹಿ ಮಾರ್ಗಗಳನ್ನು ನಿರ್ಮಿಸುವುದು ರಾಜ್ಯ ಸರ್ಕಾರ ಹಾಗೂ ನಗರಪಾಲಿಕೆಯ ಪ್ರಮುಖ ಆದ್ಯತೆ ಆಗಿದೆ. ಆದರೆ ಅದಕ್ಕೆ ನಾಗರಿಕರು ಸಹ ಕೈ ಜೋಡಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಮೆಜೆಸ್ಟಿಕ್ ಸುತ್ತಲೂ ಸಾರ್ವಜನಿಕ ಶೌಚಾಲಯಗಳಿದ್ದರೂ ಸಹ ಕೆಲವರು ರಸ್ತೆ ಬದಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಪಾದಚಾರಿ ಮಾರ್ಗಗಳು ಹಾಳಾಗಲಿದೆ. ಅದನ್ನು ತಪ್ಪಿಸಬೇಕಾದರೆ ಎಲ್ಲಾ ನಾಗರಿಕರು ಸ್ವಚ್ಛತೆ ಕಾಪಾಡುವುದು ಅತ್ಯಗತ್ಯ ಎಂದು ಆಯುಕ್ತರು ಹೇಳಿದ್ದಾರೆ.

ಸರ್ಕಾರವು ಜಿಬಿಎ ರಚನೆ ಮಾಡಿ ಅದರಡಿ 5 ನಗರ ಪಾಲಿಕೆಗಳನ್ನು ಸೃಷ್ಟಿ ಮಾಡಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಪ್ರತಿ ನಿತ್ಯ ಬೆಳಿಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಇರುವ ಸಮಸ್ಯೆ ಬಗೆಹರಿಸಲು ಎಲ್ಲಾ ನಗರ ಪಾಲಿಕೆಗಳ ಆಯುಕ್ತರಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ. ಅದರಂತೆ ಎಲ್ಲಾ ಕಡೆ ಭೇಟಿ ನೀಡಿ ಇರುವ ಸಮಸ್ಯೆಗಳನ್ನು ಅವಲೋಕಿಸಿ ತ್ವರಿತಗತಿಯಲ್ಲಿ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
ಮೆಜೆಸ್ಟಿಕ್ ಸುತ್ತಲಿನ 5 ರಿಂದ 6 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ನಾಗರಿಕರು ಹಾಗೂ ಎನ್.ಜಿ.ಓ. ಗಳ ಸಹಕಾರದೊಂದಿಗೆ ಮೆಜೆಸ್ಟಿಕ್ ಸುತ್ತಲಿನ ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಸ್ವಚ್ಛತೆ ಇಲ್ಲದ ಕಡೆ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ನಿರ್ಮೂಲನೆ ಮಾಡಿ, ಸಸಿಗಳನ್ನು ನೆಟ್ಟು ಆಕರ್ಷಣಿಯ ಹಾಗೂ ಮಾದರಿ ಪಾದಚಾರಿ ಮಾರ್ಗವನ್ನು ಮಾಡುವ ಅಭಿಯಾನವನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಆಕರ್ಷಣೀಯ ಸ್ಥಳವನ್ನಾಗಿಸುವ ಕಾರ್ಯದಲ್ಲಿ ನಗರ ಪಾಲಿಕೆ ಅಧಿಕಾರಿಗಳು ಹಾಗೂ 50 ಜನ ಸ್ವಯಂ ಸೇವಕರಿದ್ದು, 40 ಲೀಟರ್ ಬಣ್ಣ ಬಳಸಿ ಶೀಟ್ ಗಳಿಗೆ ಬಣ್ಣ ಬಳಿಯಲಾಗಿದೆ. ನಾಗರಿಕರು ಕುಳಿತುಕೊಳ್ಳಲು ಪಾದಚಾರಿ ಮೇಲೆ ಆಸನಗಳ ವ್ಯವಸ್ಥೆ ಕೂಡಾ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಎರಡು ದಿನಗಳ ಹಿಂದೆ ವಿದೇಶಿ ಇನ್ ಫ್ಲೂಎಂಜರ್ ಆದ ಕೆಲಬ್ ರವರು ಮೆಜೆಸ್ಟಿಕ್ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳ ಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದರು. ಅದನ್ನು ಕೇಂದ್ರ ನಗರ ಪಾಲಿಕೆ ಆಯುಕ್ತರು ಗಂಭೀರ ವಿಷಯವಾಗಿ ಪರಿಗಣಿಸಿ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ನಿನ್ನೆ ಗಾಂಧಿ ನಗರ ವಿಭಾಗದ ಅಧಿಕಾರಿ, ಸಿಬ್ಬಂದಿ ತಂಡವು ಪಾದಚಾರಿ ಮಾರ್ಗದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಂಡು, ಜೆಟ್ಟಿಂಗ್ ಯಂತ್ರದ ಮೂಲಕ ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿ, ವಾಸನೆ ಬರದಂತೆ ಬ್ಲೀಚಿಂಗ್ ಪೌಡರ್ ಹಾಕಿ, ಸ್ವಚ್ಛಗೊಳಿಸಲಾಗಿತ್ತು. ಇಂದು ಅದೇ ಜಾಗದಲ್ಲಿ ಪಾದಚಾರಿ ಮಾರ್ಗವನ್ನು ಆಕರ್ಷಣಿಯ ಸ್ಥಳವನ್ನಾಗಿ ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.
ತಪಾಸಣೆ ವೇಳೆಯ ಇತರೆ ಪ್ರಮುಖ ಅಂಶಗಳು:
1. ಫ್ರಿಡಂ ಪಾರ್ಕ್ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮೇಲ್ಭಾಗದಲ್ಲಿ ಪ್ರತಿಭಟನೆ ಮಾಡುವ ಸ್ಥಳದಲ್ಲಿ, ಪ್ರತಿಭಟನೆ ಇಲ್ಲದ ವೇಳೆ ವೇಳೆ ಪ್ರದರ್ಶನಗಳನ್ನು ನಡೆಸಲು ಸ್ಥಳ ನೀಡಲು ಸೂಚನೆ.
2. ಎಂ.ಎಲ್.ಸಿ.ಪಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸಲು ಸೂಚನೆ
3. ತೆಂಗಿನ ನಾರು ತಯಾರಿಸುವ ಘಟಕ ಸ್ಥಗಿತವಾಗಿದ್ದು, ಗುತ್ತಿಗೆದಾರರಿಗೆ ನೋಟೀಸ್ ನೀಡಲು ಸೂಚನೆ.
4. ಪಾದಚಾರಿ ಮಾರ್ಗಗಳಲ್ಲಿ ಪೈಪ್ ಗಳನ್ನು ಹಾಗೆಯೇ ಬಿಟ್ಟಿದ್ದು, ನೋಟೀಸ್ ನೀಡಲು ಸೂಚನೆ.
5. ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಓ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಲು ಸೂಚನೆ.
6. ಆನಂದ್ ರಾವ್ ವೃತ್ತದ ಬಳಿ ಡಕ್ಟ್ ಗಳ ಚೇಂಬರ್ ಸ್ಲ್ಯಾಬ್ ಹಾಳಾಗಿದ್ದು, ಅದನ್ನು ಕೂಡಲೇ ಅಳವಡಿಸಲು ಸೂಚನೆ.
7. ಸಾರ್ವಜನಿಕ ಶೌಚಾಲಯ ಬಳಿ ಶುಚಿತ್ವ ಕಾಪಾಡಿಕೊಳ್ಳಲು ಸೂಚನೆ.
8. ರಸ್ತೆ ಬದಿ ಎಳನೀರು ಮಾರಾಟ ಮಾಡುವವರು ತೆಂಗಿನ ಚಿಪ್ಪುಗಳನ್ನು ಸ್ಥಳದಲ್ಲಿಯೇ ಬಿಡದಂತೆ ಕ್ರಮವಹಿಸಲು ಸೂಚನೆ.












Click it and Unblock the Notifications