ಸಿಡಿ ಸ್ಫೋಟ ಪ್ರಕರಣ: ಜಾರಕಿಹೊಳಿ ಎಸ್ಐಟಿಗೆ ಕೊಟ್ಟ ನಾಲ್ಕು ಪುಟ ಹೇಳಿಕೆಯಲ್ಲಿ ಬಿಚ್ಚಿಟ್ಟ ರಹಸ್ಯ ಏನು ?
ಬೆಂಗಳೂರು, ಮಾರ್ಚ್ 16: ಮಂತ್ರಿ ಪದವಿ ಜತೆಗೆ ರಾಜಕೀಯ ಭವಿಷ್ಯಕ್ಕೆ ಕಪ್ಪು ಚುಕ್ಕಿ ಇಟ್ಟ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರಿಂದ ವಿಶೇಷ ತನಿಖಾ ತಂಡ ಹೇಳಿಕೆ ದಾಖಲಿಸಿಕೊಂಡಿದೆ. ನಾಲ್ಕು ಪುಟಗಳ ಹೇಳಿಕೆಯಲ್ಲಿ ರಮೇಶ್ ಜಾರಕಿಹೊಳಿ ಕೆಲವು ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಹೇಳಿಕೆ ದಾಖಲಿಸಿದ್ದಾರೆ. ಇದು ನಕಲಿ ಸಿಡಿ ಎಂಬ ವಾದದಿಂದ ಮಾತ್ರ ರಮೇಶ್ ಜಾರಕಿಹೊಳಿ ಹೊರಗೆ ಬಂದಿಲ್ಲ. ಜಾರಕಿಹೊಳಿಯ ನಕಲಿ ಸಿಡಿ ಕಥೆಯ ರಹಸ್ಯ ತಂತ್ರ ಮಾತ್ರ ನಿಗೂಢವಾಗಿದೆ.
Recommended Video
ನನಗೆ ನಾಲ್ಕು ತಿಂಗಳ ಹಿಂದೆಯೇ ಹಣದ ಬಗ್ಗೆ ಪ್ರಸ್ತಾಪ ಮಾಡಿದರು. ನನ್ನ ಆಪ್ತ ನಾಗರಾಜ್ ಮೂಲಕ ಹಣಕ್ಕೆ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೆ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ರಾಜಕೀಯವಾಗಿ ಮುಗಿಸುವುದಾಗಿ ಹೇಳಿದರೂ ನಾನು ಅವರ ಒತ್ತಡಕ್ಕೆ ಮಣಿದಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಸಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸಿಡಿ ತಯಾರಿಸಿ ಹರಿದು ಬಿಡಲಾಗಿದೆ. ನನ್ನ ರಾಜಕೀಯ ಮುಗಿಸುವ ಮಸಲತ್ತು ನಡೆಸಿ ಅದರ ಭಾಗವಾಗಿ ಸಿಡಿ ಬಿಡುಗಡೆ ಆಗಿದೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಯಾವ ರಾಜಕಾರಣಿಯ ಹೆಸರನ್ನು ಸಹ ಹೇಳಿಕೆಯಲ್ಲಿ ದಾಖಲಿಸಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಜಾರಕಿ ಹೊಳಿ ಮೆನೆಗೆ ತೆರಳಿ ಹೇಳಿಕೆ: ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿ ಎಸ್ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ನನಗೆ ಆಪ್ತರ ಮೂಲಕ ಸಿಡಿ ವಿಚಾರ ಗೊತ್ತಿತ್ತು. ಅದಕ್ಕಾಗಿ ಐದು ಕೋಟಿ ಬೇಡಿಕೆ ಇಟ್ಟಿದ್ದರು. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಅದಕ್ಕೆ ಆಸ್ಪದ ನೀಡಿರಲಿಲ್ಲ. ಆನಂತರ ನನ್ನ ರಾಜಕೀಯ ಎದುರಾಳಿಗಳು ಷಡ್ಯಂತ್ರ ನಡೆಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾನಿಲ್ಲ. ನನ್ನ ವಿರುದ್ಧ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ. ಇದರಲ್ಲಿ ಹಲವರು ಶಾಮೀಲಾಗಿದ್ದಾರೆ ಎಂದು ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಅಶ್ಲೀಲ ಸಿಡಿ ಬಿಡುಗಡೆ ಮುನ್ನ ನನಗೆ ಐದು ಕೋಟಿ. ರೂ. ಬೇಡಿಕೆ ಇಟ್ಟಿದ್ದರು. ಇದಕ್ಕೆ ನಾನು ಆಸ್ಪದ ಕೊಟ್ಟಿರಲಿಲ್ಲ. ಆನಂತರ ಇದರಲ್ಲಿ ಹಲವು ಪ್ರಭಾವಿ ನಾಯಕರು ಸೇರಿಕೊಂಡು ಷಡ್ಯಂತ್ರ ನಡೆಸಿದ್ದಾರೆ. ನನ್ನ ರಾಜಕೀಯ ಭವಿಷ್ಯ ಮುಗಿಸಲು ಮಸಲತ್ತು ನಡೆಸಿದ್ದಾರೆ. ಇದರಲ್ಲಿ ಹಲವು ಪ್ರಭಾವಿ ನಾಯಕರು ಸೇರಿಕೊಂಡಿದ್ದಾರೆ. ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ಜಾರಕಿಹೊಳಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಶಂಕಿತ ಆರೋಪಿ ಪತ್ನಿಗೆ ನೋಟಿಸ್ : ಇನ್ನು ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯ ಪತ್ನಿಗೆ ವಿಶೇಷ ತನಿಖಾ ತಂಡ ನೋಟಿಸ್ ಜಾರಿ ಮಾಡಿತ್ತು. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗುವಂತೆ ಎಸ್ಐಟಿ ಎಸಿಪಿ ಧರ್ಮೇಂದ್ರ ತುಮಕೂರು ಮೂಲದ ವ್ಯಕ್ತಿಯ ಪತ್ನಿಗೆ ರವಾನಿಸಿದ್ದರು. ಆದರೆ, ಆಕೆಯ ಪರವಾಗಿ ವಕೀಲರು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.












Click it and Unblock the Notifications