Bengaluru: ತೆಲುಗು ನಟಿಯರು ಭಾಗಿಯಾಗಿದ್ದ ರೇವ್‌ಪಾರ್ಟಿ ಮೇಲೆ ಸಿಸಿಬಿ ದಿಢೀರ್ ದಾಳಿ- ಈ ವೇಳೆ ಏನಲ್ಲಾ ಪತ್ತೆಯಾದ್ವು ಗೊತ್ತಾ?
ಬೆಂಗಳೂರು, ಮೇ, 20: ಇಂದು (ಮೇ 20) ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ಹೌಸ್ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟ್ ಮೇಲೆ ಸಿಸಿಬಿ ತಂಡ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇದರಲ್ಲಿ ಕೆಲ ತೆಲುಗು ನಟಿಯರು ಕೂಡ ಭಾಗಿಯಾಗಿದ್ದರು ಎಂದು ಟಿವಿ 9 ಕನ್ನಡ ವರದಿ ಮಾಡಿದೆ.
ಹಾಗಾದರೆ ಈ ಫಾರ್ಮ್ಸ್‌ಹೌಸ್ ಲೇಟ್‌ನೈಟ್ ಪಾರ್ಟಿಯಲ್ಲಿ ನಟಿಯರ ಜೊತೆ ಯಾವೆಲ್ಲ ಕೋಟಿ ಕುಳಗಳು ಭಾಗಿಯಾಗಿದ್ದವು? ಈ ಪಾರ್ಟಿ ಯಾರ ನೇತೃತ್ವದಲ್ಲಿ ನಡೆದಿದ್ದು ಹಾಗೂ ವೆಚ್ಚ ಎಷ್ಟು ಮಾಡಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ G.R.ಫಾರ್ಮ್‌ಹೌಸ್‌ನಲ್ಲಿ ಹೈದ್ರಾಬಾದ್ ಮೂಲದ ವಾಸು ಎಂಬಾತ ಬರ್ತಡೇ ಹೆಸರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದು, ಈ ಪಾರ್ಟಿ ತಡರಾತ್ರಿ 3 ಗಂಟೆಯಾದರೂ ಅಂತ್ಯವಾಗಿರಲಿಲ್ಲ. ನಿಯಮ ಉಲ್ಲಂಘಿಸಿ ಅವಧಿ ಮೀರಿ ಪಾರ್ಟಿ ಮಾಡಲಾಗಿತ್ತು. ಆದ್ದರಿಂದ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಸಿಸಿಬಿ ಪೊಲೀಸರ ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಕಂಡುಬಂದಿದ್ದು, ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಮತ್ತು 25ಕ್ಕೂ ಹೆಚ್ಚು ಯುವತಿಯರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಇನ್ನು ಆಯೋಜಕ ಪಾರ್ಟಿಗಾಗಿಯೇ ಆಂಧ್ರದಿಂದ ವಿಮಾನದಲ್ಲಿ ಜನರನ್ನು ಕರೆಸಿಕೊಂಡಿದ್ದ ಎನ್ನುವ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.
ಒಂದು ಬೆಂಜ್ ಕಾರಿನಲ್ಲಿ ಆಂಧ್ರ ಮೂಲದ ಶಾಸಕ ಕಾಕನಿ ಗೋವರ್ಧನರೆಡ್ಡಿ ಹೆಸರಿನ ಪಾಸ್ ಕಂಡುಬಂದಿರುವುದು ಅಚ್ಚರಿಯ ವಿಚಾರವಾಗಿದೆ. ಅಷ್ಟೇ ಅಲ್ಲದೆ, ಫಾರ್ಮ್‌ಹೌಸ್ ಬಳಿ ಮರ್ಸಿಡಿಸ್, ಬೆನ್ಜ್, ಜಾಗ್ವಾರ್, ಆಡಿ ಕಾರ್ ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಕಂಡುಬಂದಿವೆ. ಈ ಪಾರ್ಟಿಯಲ್ಲಿ ಮಾಡೆಲ್ಗಳು ಹಾಗೂ ಟೆಕ್ಕಿಗಳು, ತೆಲುಗು ನಟಿಯರು ಸಹ ಭಾಗಿಯಾಗಿದ್ದರು ಎಂದು ತಿಳಿದುಬಂದಿದ್ದು, ಸದ್ಯ ಈ ಘಟನೆ ಸಂಬಂಧ ಎಲೆಕ್ಟ್ರಾನಿಕ್ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
30-50 ಲಕ್ಷ ರೂಪಾಯಿ ಖರ್ಚು ಮಾಡಿ ಈ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು ಎನ್ನಲಾಗಿದ್ದು, ಇದೀಗ ನಾರ್ಕೊಟಿಕ್ಸ್ ಸ್ನಿಫರ್ ಡಾಗ್‌ಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications