CCB Raid On Jail: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ- ಅಂದು ಸಿಗದೇ ಇದ್ದದ್ದು ಇಂದು ಸಿಕ್ತು...
ಬೆಂಗಳೂರು ಸೆಪ್ಟೆಂಬರ್ 15: ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗ ಸಿಗದೇ ಇದ್ದಿದ್ದು ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಸಿಸಿಬಿ ಪೊಲೀಸರು ದಾಳಿ ವೇಳೆ ಸಿಕ್ಕಿದೆ. ಹೌದು.. ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಏನೂ ಸಿಗದೇ ಬರಿಗೈಯಲ್ಲಿ ತೆರಳಿದ್ದರು. ಆದರೆ ಈ ಬಾರಿ ದಾಳಿ ವೇಳೆ ಹಣ, ಡ್ರಗ್ಸ್ ಹಾಗೂ ಮೊಬೈಲ್ ಫೋನ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಪರಪ್ಪನ ಅಗ್ರಹಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪಡೆಯುವ ಫೋಟೋ ವೈರಲ್ ಆದ ಬೆನ್ನಲ್ಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ದರ್ಶನ್ ಜೈಲಿನಲ್ಲಿರುವ ರೌಡಿಗಳೊಂದಿಗೆ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಹೌದು.. ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಶನಿವಾರ ದಾಳಿ ಮಾಡಿದ್ದಾರೆ. ರೌಡಿಶೀಟರ್ ವಿಲ್ಸನ್‌ಗಾರ್ಡನ್ ನಾಗ ಮತ್ತು ಆತನ ಸಹಚರರ ಬಳಿ ಸುಮಾರು 18 ಮೊಬೈಲ್‌ಫೋನ್ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಡ್ರಗ್ಸ್ ಹಾಗೂ ಹಣವನ್ನೂ ಸೀಜ್ ಮಾಡಲಾಗಿದೆ.
ಈ ಹಿಂದೆ (ಆಗಸ್ಟ್ 24) ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಹಾರ ಜೈಲಿನ ಮೇಲೆ ದಾಳಿ ಮಾಡಿದ್ದರು. ಆದರೆ ಆಗ ಏನೂ ಸಿಗದೇ ವಾಪಾಸ್ಸಾಗಿದ್ದರು. ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ ಮರು ದಿನವೇ ಅಂದರೆ ಆಗಸ್ಟ್ 25 ರಂದು ಕೊಲೆ ಆರೋಪಿ ದರ್ಶನ್ ಜೈಲಿನ ಇತರ ಸಹಚರರೊಂದಿಗೆ ಚಹಾ ಮಗ್ ಹಾಗೂ ಸಿಗರೇಟ್ ಹಿಡಿದುಕೊಂಡು ಕುಳಿತಿರುವ ಫೋಟೋ ವೈರಲ್ ಆಗಿತ್ತು.

ಇದರಿಂದಾಗಿ ಸಿಸಿಬಿ ಅಧಿಕಾರಿಗಳ ದಾಳಿ ವಿಚಾರ ಸೋರಿಕೆಯಾಗಿತ್ತು ಎನ್ನುವ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸಿಸಿಬಿ ಹೆಚ್ಚುವರಿ ಆಯುಕ್ತ ಡಾ. ಚಂದ್ರಗುಪ್ರ ಅವರಿಗೆ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಈ ಬಾರಿ ಜಾಗರೂಕರಾಗಿ ಸಿಸಿಬಿ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ದಾಳಿ ವೇಳೆ ಡ್ರಗ್ಸ್, ಹಣ ಹಾಗೂ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ.












Click it and Unblock the Notifications