ನೇಮಕಾತಿ ಹಗರಣ: ಎಸ್ಪಿ ಸೇರಿ ನಾಲ್ವರು ಪೊಲೀಸರ ಬಂಧನ
ಬೆಂಗಳೂರು, ಜು.11: ಸರ್ಕಾರಿ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿ ಕೋಟಿಗಟ್ಟಲೆ ಹಣ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎಸ್‌ಪಿ ಸೇರಿದಂತೆ ಮೂವರು ಪೊಲೀಸ್ ಪೇದೆಗಳನ್ನು ಬಂಧಿಸಿದ್ದಾರೆ.
ಎಡಿಜಿಪಿ ರಾಘವೇಂದ್ರ ಹೆಚ್ ಔರಾದ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದರು. ಪಿಎಸ್ಐ ಪರೀಕ್ಷಾ ಆಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವುದಾಗಿ ಕೆಲವರು ವಂಚನೆ ಮಾಡುತ್ತಿದ್ದಾರೆ, ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದರು.
ಈ ಕುರಿತು ತನಿಖೆ ನಡೆಸಿದಾಗ 14 ಕೋಟಿ ರೂ. ವಂಚನೆ ಮಾಡಿರುವುದು ತಿಳಿದುಬಂದಿದೆ. ನೇಮಕಾತಿ ವಿಭಾಗದ ಎಸ್ಪಿ ರಾಜೇಶ್, ನಾಗರಾಜ್, ಲಕ್ಷ್ಮೀಕಾಂತ್, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಮಹಿಳಾ ಮುಖ್ಯಪೇದೆ ಶಬೀನಾ ಬೇಗಂ ಎಂದು ಗುರುತಿಸಲಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆ ಸಿಸಿಬಿ ತನಿಖೆಗೆ ವಹಿಸಿತ್ತು. ತನಿಖೆ ಮುಂದಾದ ಸಿಸಿಬಿ ತಂಡವನ್ನು ರಚನೆ ಮಾಡಿತ್ತು. ತನಿಖೆ ವೇಳೆ ವಂಚನೆ ಮಾಡುತ್ತಿರುವುದು ಸಾಬೀತಾಗಿತ್ತು. ಇದರಂತೆ ಎಸಿಪಿಯವರು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಾಲ್ವರನ್ನು ಬಂಧನಕ್ಕೊಳಪಡಿಸಿದರು.
ನಾವು ಪೊಲೀಸ್ ಇಲಾಖೆಯಲ್ಲಿಯೇ ಇರುವುದರಿಂದ ಪಿಎಸ್ಐ ಹುದ್ದೆ ಕೊಡಿಸುತ್ತೇವೆಂದು ನಾಲ್ವರು ಆಕಾಂಕ್ಷಿಗಳಿಗೆ ಭರವಸೆಗಳನ್ನು ನೀಡುತ್ತಿದ್ದರು. ಶಬಾನಾ ಅವರು ಐಎಎಸ್ ಅಧಿಕಾರಿ ಎಂಬಂತೆ ಬಿಂಬಿಸಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications