ಬಂಧನದ ಭೀತಿಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ?
ಬೆಂಗಳೂರು, ಜೂನ್ 23 : ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಬಂಧನದ ಭೀತಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಐಎಂಎ ಹಗರಣಲ್ಲಿ ಆರೋಪಿಯಾಗಿದ್ದ ಅವರಿಗೆ ವಿಚಾರಣೆಗೆ ಬರುವಂತೆ ಸಿಬಿಐ ನೋಟಿಸ್ ನೀಡಿತ್ತು.
ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ (59) ಜಯನಗರದಲ್ಲಿನ ನಿವಾಸದಲ್ಲಿ ಮಂಗಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಲಕ್ ನಗರ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆ
ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ವಿಚಾರಣೆಗೆ ಬರುವಂತೆ ಸಿಬಿಐ ಮೂರು ದಿನಗಳ ಹಿಂದೆ ಆರೋಪಿಯಾಗಿದ್ದ ಬಿ. ಎಂ. ವಿಜಯ ಶಂಕರ್‌ಗೆ ನೋಟಿಸ್ ನೀಡಿತ್ತು. ಮತ್ತೆ ಬಂಧನವಾಗಬಹುದು ಎಂಬ ಭೀತಿಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಐಎಂಎ ಹಗರಣ; ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ!
ಎರಡು ಮೂರು ದಿನಗಳಿಂದ ಹಲವು ಬಾರಿ ವಿಜಯ್ ಶಂಕರ್ ವಿಧಾನಸೌಧಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ಸಿಕ್ಕಿದೆ. 5 ದಿನದೊಳಗೆ ವಿಚಾರಣೆಗೆ ಬರಬೇಕು ಎಂದು ಸಿಬಿಐ ಮೂರು ದಿನದ ಹಿಂದೆ ನೀಡಿದ್ದ ನೋಟಿಸ್‌ನಲ್ಲಿ ಸೂಚನೆ ನೀಡಿತ್ತು.
ಐಎಂಎ ಹಗರಣ; ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್
ಮಂಗಳವಾರ ಮನೆಯಲ್ಲಿ ಇದ್ದ ವಿಜಯ್ ಶಂಕರ್ ಸಂಜೆ ಮೊದಲ ಮಹಡಿಯಲ್ಲಿದ್ದ ರೂಂ ಸೇರಿಕೊಂಡಿದ್ದರು. ಅಲ್ಲಿಯೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿದ್ದಾರೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅಮಾನತು ರದ್ದು : ಬಿ. ಎಂ. ವಿಜಯ್ ಶಂಕರ್ ಅಮಾನತು ಆದೇಶ 20 ದಿನದ ಹಿಂದೆ ರದ್ದಾಗಿತ್ತು ಎಂಬ ಮಾಹಿತಿಯೂ ಸಿಕ್ಕಿದೆ. ಸಕಾಲ ಯೋಜನೆ ಆಯುಕ್ತರಾಗಿ ಅವರನ್ನು ನೇಮಕ ಮಾಡಲಾಗಿತ್ತು.