ಕಾವೇರಿ ಸಮಸ್ಯೆ: ನೀರು ಬಿಡದಂತೆ ಆಗ್ರಹಿಸಿ ಇಂದು ಮಧ್ಯಾಹ್ನ 'ವಿಧಾನಸೌಧ ಮುತ್ತಿಗೆ', ವಿವರ
ಬೆಂಗಳೂರು, ಅಕ್ಟೋಬರ್ 17: ಕಾವೇರಿ ನೀರು ಹಂಚಿಕೆ ವಿರುದ್ಧ ಸರ್ಕಾರದ ಮೇಲಿನ ಆಕ್ರೋಶ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ಪ್ರತಿಭಟನೆ ಬಳಿಕವು ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಇಂದು ಮಂಗಳವಾರ ಮಧ್ಯಾಹ್ನ 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ವತಿಯಿಂದ ಹೋರಾಟಗಾರರು ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.
ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷ ಮತ್ತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧ ಮುತ್ತಿಗೆ ಹಾಕಲು ಕನ್ನಡಪರ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಸಜ್ಜಾಗಿದ್ದಾರೆ.

ಇದಕ್ಕೂ ಮೊದಲು ಮೊದಲು ಕನ್ನಡ ಒಕ್ಕೂಟದ ಆಶ್ರಯದಲ್ಲಿ ದೇವರಾಜ ಅರಸು ಅವರ ಪ್ರತಿಮೆಯಿಂದ ಹೊರಟು ನೇರವಾಗಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ನಾಗರಾಜ್ ಅವರು ತಿಳಿಸಿದ್ದಾರೆ.
ಕಾವೇರಿ ಜಲಾಶಯದಲ್ಲಿ ನೀರಿಲ್ಲದೇ ಬಣಗುಡುತ್ತಿದೆ. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ. ತುರ್ತು ವಿಧಾನಸಭೆ ಕರೆದು, ಸರ್ವಾನುಮತದಿಂದ ನಿರ್ಣಯ ಮಾಡಿ. ಲೋಕಸಭಾ ಸದಸ್ಯರು ಕೂಡಲೇ ರಾಜೀನಾಮೆ ನೀಡಬೇಕು. ಕಾವೇರಿ ಪ್ರಾಧಿಕಾರ ಮತ್ತು ಕಾವೇರಿ ನೀರು ನಿರ್ವಹಣಾ ಸಮಿತಿ ನಮಗೆ ತೀವ್ರ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಇತ್ತ ರಾಜ್ಯ ಸರ್ಕಾರ ಯಾವುದೇ ಅಡ್ಡಿ ಆತಂಕ ಇಲ್ಲದೇ ನೀರು ಬಿಡುತ್ತಿದ್ದಾರೆ.
ಇದರ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ. ಅದರ ಭಾಗವಾಗೇ ಇಂದು ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದರು.
ಈ ವೇಳೆ ಒಕ್ಕೂಟದ ಮುಖಂಡರು, ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಡಾ.ಸಾ.ರಾ. ಗೋವಿಂದು, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್.ಕೆ.ಆರ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಎಚ್‌ವಿ ಗಿರೀಶ್ ಗೌಡ ಸೇರಿದಂತೆ ಕನ್ನಡಪರ ಸಂಘಟನೆಗಳು, ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ ಸಂಘಟನೆಯ ಪ್ರಕಟಣೆ ತಿಳಿಸಿದೆ.












Click it and Unblock the Notifications