ಕಾವೇರಿ ವಿವಾದ: ನಾಳೆ ಮತ್ತೊಂದು ಸುತ್ತಿನ ಸಮರಕ್ಕೆ ರಣಕಹಳೆ ಊದಿದ ವಾಟಾಳ್ ನಾಗರಾಜ್
ಬೆಂಗಳೂರು, ಅಕ್ಟೋಬರ್, 04: ರಾಜ್ಯದಲ್ಲಿ ಕಾವೇರಿಗಾಗಿ ಎದ್ದಿದ್ದ ಕಿಚ್ಚಿನ ಜ್ವಾಲೆ ನಾಳೆ ಮತ್ತೊಮ್ಮೆ ಕಾವು ಪಡೆಯೋಕೆ ಸಜ್ಜಾಗಿದೆ. ಈಗಾಗಲೇ ಕರ್ನಾಟಕ ಬಂದ್ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಾಟಾಳ್ ನಾಗರಾಜ್, ನಾಳೆ ಮತ್ತೊಂದು ಸುತ್ತಿನ ಸಮರಕ್ಕೆ ರಣಕಹಳೆ ಊದಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ನಾಳೆ ಬೆಂಗಳೂರಿನಿಂದ ರ‍್ಯಾಲಿ ನಡೆಸಿವುದಕ್ಕೆ ಸಜ್ಜಾಗಿರುವ ವಾಟಾಳ್ ಹಾಗೂ ಕನ್ನಡಪರ ಸಂಘಟನೆಗಳು, ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಲು ಸಜ್ಜಾಗಿ ನಿಂತಿವೆ. ನಾಳೆ ಮತ್ತೆ ಕಾವೇರಿ ಕಾವು ಹೇಗಿರಲಿದೆ ಅನ್ನುವುದರ ಮಾಹಿತಿ ಇಲ್ಲಿದೆ ಗಮನಿಸಿ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳ ಜೊತೆಗೆ ಹಲವು ಪ್ರತಿಭಟನೆಗಳ ಮೂಲಕ ಕಾವೇರಿ ನಮ್ಮದು ಅನ್ನುವ ಕೂಗನ್ನು ಕನ್ನಡಿಗರು ಎಲ್ಲೆಡೆ ಪ್ರಸರಿಸಿದ್ದರು. ಕರ್ನಾಟಕ ಬಂದ್ ಮೂಲಕ ಕಾವೇರಿ ನಮ್ಮವಳು ಅನ್ನೋ ಕೂಗು ಮೊಳಗಿಸಿದ್ದ ಹೋರಾಟಗಾರರು, ಇದೀಗ ಮತ್ತೆ ಕಾವೇರಿಗಾಗಿ ರಣಕಹಳೆ ಮೊಳಗಿಸಲು ಸಜ್ಜಾಗಿ ನಿಂತಿದ್ದಾರೆ. ಸದಾ ವಿಭಿನ್ನ ಪ್ರತಿಭಟನೆಗಳ ಮೂಲಕ ಖ್ಯಾತಿ ಪಡೆದಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಳೆ ಕೆಆರ್‌ಎಸ್ ಮುತ್ತಿಗೆ ಹಾಕಿ ಪ್ರತಿಭಟಿಸುವುದಕ್ಕೆ ಸಜ್ಜಾಗಿದ್ದಾರೆ.
ನಾಳೆ ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿಯಿಂದ ರ‍್ಯಾಲಿ ನಡೆಸುವುದಕ್ಕೆ ವಾಟಾಳ್ ನಾಗಾರಾಜ್ ಸಜ್ಜಾಗಿದ್ದು, ಸುಮಾರು 5 ಸಾವಿರ ಕಾರುಗಳು ಹಾಗೂ 20 ಸಾವಿರ ಬೈಕ್‌ಗಳ ಜೊತೆಗೆ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ ರ‍್ಯಾಲಿ ನಡೆಸುವುದಕ್ಕೆ ಪ್ಲಾನ್ ರೂಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಆರಂಭವಾಗಲಿರುವ ರ‍್ಯಾಲಿ, ಕೆಆರ್‌ಎಸ್ ತನಕ ಸಾಗಲಿದ್ದು, ಬಳಿಕ ಕೆಆರ್‌ಎಸ್ ಮುತ್ತಿಗೆ ಹಾಕಿ ಪ್ರತಭಟಿಸೋಕೆ ತಯಾರಿ ನಡೆದಿದೆ. ಇನ್ನು ಎಷ್ಟೇ ಹೋರಾಟ ಮಾಡಿದರೂ ತಮಿಳುನಾಡಿಗೆ ಕಾವೇರಿ ಹರಿಯುತ್ತಿರೋದನ್ನು ವಿರೋಧಿಸಲು ಕನ್ನಡಿಗರ ಪಡೆ ಸಜ್ಜಾಗಿ ನಿಂತಿದೆ.
ಸದ್ಯ ಕೆಆರ್‌ಎಸ್ ಒಡಲು ಖಾಲಿಯಾಗ್ತಿದ್ದರೂ ಕೂಡ ತಲೆಕೆಡಿಸಿಕೊಳ್ಳದ ಸರ್ಕಾರದ ವಿರುದ್ಧ ಕನ್ನಡಿಗರು ಸಮರ ಸಾರಿದ್ದು, ಬಂದ್, ಪ್ರತಿಭಟನೆಗಳಿಗೆ ಜಗ್ಗದ ಸರ್ಕಾರಕ್ಕೆ ಮತ್ತೊಂದು ಬೃಹತ್ ರ‍್ಯಾಲಿ ಮೂಲಕ ಬಿಸಿ ಮುಟ್ಟಿಸೋಕೆ ವಾಟಾಳ್ ನಾಗರಾಜ್ ಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ ಬಂದ್ ವೇಳೆ ಅಲರ್ಟ್ ಆಗಿದ್ದ ಪೊಲೀಸರು ನಾಳಿನ ರ‍್ಯಾಲಿ ತಡೆಗೂ ತೆರೆಮರೆಯಲ್ಲಿ ಸಿದ್ಥತೆ ನಡೆದಿದ್ದು, ರ‍್ಯಾಲಿ ಹೇಗಿರಲಿದೆ ಅನ್ನೋದನ್ನು ಕಾದುನೋಡಬೇಕಿದೆ.












Click it and Unblock the Notifications