ಬೆಂಗಳೂರು : ಎಟಿಎಂಗೆ ಹಣ ತುಂಬುವ ವ್ಯಕ್ತಿ 1 ಕೋಟಿಯೊಂದಿಗೆ ಪರಾರಿ
ಬೆಂಗಳೂರು, ಮೇ 07: ಎಟಿಎಂಗಳಿಗೆ ಹಣ ತುಂಬುವ ವ್ಯಕ್ತಿಯೇ 1 ಕೋಟಿ ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಡುಗೋಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಿಶೋರ್ ಕುಮಾರ್ (28) ಎಂಬ ವ್ಯಕ್ತಿ ಮೇ 1ರಂದು ಹಣದೊಂದಿಗೆ ಪರಾರಿಯಾಗಿದ್ದು, ಆತನ ಸ್ನೇಹಿತ ಸಹ ಇದಕ್ಕೆ ಸಹಕಾರ ನೀಡಿದ್ದಾನೆ. ಸೆಕ್ಯೂರ್ ವ್ಯಾಲ್ಯೂ ಎಂಬ ಎಟಿಎಂಗೆ ಹಣ ತುಂಬುವ ಕಂಪನಿ ಈ ಕುರಿತು ಪೊಲೀಸರಿಗೆ ದೂರು ನೀಡಿದೆ.
ರೂಟ್ ನಂ 1ರಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಕುಮಾರ್ ಮೇ 1ರಂದು ಹಲವು ಎಟಿಎಂಗಳಿಗೆ ಹಣ ತುಂಬಿಸಿದ್ದ. ಆದರೆ, ಮೇ 2ರಂದು ಕೆಲಸಕ್ಕೆ ಗೈರು ಹಾಜರಾಗಿದ್ದ ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು.

ಆದ್ದರಿಂದ ಕಂಪನಿ ಬೇರೆಯವರನ್ನು ಆ ರೂಟ್‌ಗೆ ನಿಯೋಜನೆ ಮಾಡಿತ್ತು. ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂನಿಂದ 47.83 ಲಕ್ಷ ಹಣ, ರತ್ನಾಕರ ಸಹಕಾರಿ ಬ್ಯಾಂಕ್ ಎಟಿಎಂನಿಂದ 51.30 ಲಕ್ಷ ಹಣವನ್ನು ಕಿಶೋರ್ ಕುಮಾರ್ ಪಡೆದು, ಪರಾರಿಯಾಗಿಯಾಗಿದ್ದಾರೆ.
ಎಟಿಎಂ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಸೆಕ್ಯೂರ್ ವ್ಯಾಲ್ಯೂ ಕಂಪನಿಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಕಿಶೋರ್ ಕುಮಾರ್ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳ ಮೊಬೈಲ್ ಲೋಕೇಶನ್ ಪತ್ತೆ ಹಚ್ಚುತ್ತಿದ್ದು, ಶೀಘ್ರದಲ್ಲೇ ಬಂದಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಇಂತಹ ಪ್ರಕರಣ ಇದೇ ಮೊದಲಲ್ಲ. ಎಟಿಎಂಗೆ ಹಣ ತುಂಬುವ ವ್ಯಾನ್ ಜೊತೆ ಪರಾರಿಯಾಗಿರುವ ಘಟನೆ ಹಿಂದೆಯೂ ನಡೆದಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದರು.












Click it and Unblock the Notifications