Viral Video: ಕೆನರಾ ಬ್ಯಾಂಕ್‌ನಲ್ಲಿ ಹಿಂದಿ ಸಿಬ್ಬಂದಿ - ವೃದ್ಧೆ ಪರದಾಟ, ಕನ್ನಡಿಗರ ವಿರೋಧ!
Canara Bank Viral Video: ಕರ್ನಾಟಕದಲ್ಲಿ ಕೆಲವು ಪ್ರಮುಖ ಬ್ಯಾಂಕ್‌ಗಳ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ (ಸ್ಥಳೀಯ ಭಾಷೆಯಲ್ಲಿ ಮಾತನಾಡಿ) ತೊಂದರೆ ಕೊಡುತ್ತಿರುವುದು ಮುಂದುವರಿದಿದೆ. ಇದೀಗ ಕೆನರಾ ಬ್ಯಾಂಕ್‌ನ ಸಿಬ್ಬಂದಿಯೊಬ್ಬರು ಹಿಂದಿಯಲ್ಲಿ ವ್ಯವಹರಿಸಿದ್ದು, ವೃದ್ಧೆಯೊಬ್ಬರು ಹಿಂದಿಯಲ್ಲಿ ಮಾತನಾಡಲು ಆಗದೆ ಅವರ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡಿರುವ ದೃಶ್ಯ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಈ ವಿಷಯಕ್ಕೆ ನೀಡಿರುವ ಪ್ರತಿಕ್ರಿಯೆಗೂ ಕನ್ನಡಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಮಾತನಾಡದೆ, ಹಿಂದಿ ಅಥವಾ ಬೇರೆ ಭಾಷೆಗಳಲ್ಲಿ ವ್ಯವಹರಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಕರ್ನಾಟಕದ ಕೆನರಾ ಬ್ಯಾಂಕ್‌ವೊಂದರಲ್ಲಿ ವೃದ್ಧೆಯೊಬ್ಬರು ತಮ್ಮ ಖಾತೆಯಿಂದ ಹಣ ತೆಗೆದುಕೊಳ್ಳು ಬ್ಯಾಂಕ್‌ಗೆ ಹೋಗಿದ್ದು, ಆದರೆ ಅಲ್ಲಿನ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿದ್ದು ನನಗೆ ಹಿಂದಿ ಬರಲ್ಲ ಅವರು ಏನು ಹೇಳುತ್ತಿದ್ದಾರೆ ಅಂತ ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವುದು ವೈರಲ್ ಆಗಿದೆ.

ಈ ವಿಡಿಯೋವನ್ನು ನೋಡಿ ಹಲವು ಕನ್ನಡಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕರ್ನಾಟಕದ ಕನ್ನಡ ನೆಲದಲ್ಲಿ ಕನ್ನಡಿಗರು ಕನ್ನಡದಲ್ಲಿ ಸೇವೆ ಸಿಗದಂತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಒಂದು ಕಾಲದಲ್ಲಿ ಕನ್ನಡವೇ ಕೇಳುತ್ತಿದ್ದ ಬ್ಯಾಂಕ್‌ಗಳಲ್ಲಿ ಬರಿ ಹಿಂದಿ ಇಂಗ್ಲಿಷ್, ಅಪ್ಪಟ ಕನ್ನಡದ ಜಾಗಗಳಲ್ಲೂ ಎಲ್ಲಿ ನೋಡಿದ್ರು ಬರಿ ಹಿಂದಿಗರೇ. ಸಾಮಾನ್ಯ ಕನ್ನಡಿಗ ರೈತ ಮಹಿಳೆ ತನ್ನ ಭಾಷೆಯಲ್ಲಿ ಸೇವೆ ಪಡೆಯಲು ಆಗುತ್ತಿಲ್ಲ ಇದನ್ನು ನೋಡಿ ಸಮಾಧಾನ ಮಾಡಿಕೊಳ್ಳಿ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಒಂದು ಕಾಲದಲ್ಲಿ ಕನ್ನಡವೇ ಕೇಳುತ್ತಿದ್ದ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) December 8, 2025
ಬ್ಯಾಂಕ್‌ಗಳಲ್ಲಿ ಬರಿ ಹಿಂದಿ ಇಂಗ್ಲಿಷ್,
ಅಪ್ಪಟ ಕನ್ನಡದ ಜಾಗಗಳಲ್ಲೂ ಎಲ್ಲಿ ನೋಡಿದ್ರು ಬರಿ ಹಿಂದಿಗರೇ.
ಸಾಮಾನ್ಯ ಕನ್ನಡಿಗ ರೈತ ಮಹಿಳೆ ತನ್ನ ಭಾಷೆಯಲ್ಲಿ ಸೇವೆ ಪಡೆಯಲು ಆಗುತ್ತಿಲ್ಲ.@nsitharaman
ಇದನ್ನು ನೋಡಿ ಸಮಾಧಾನ ಮಾಡಿಕೊಳ್ಳಿ.@canarabank
ತಮ್ಮ ಗಮನಕ್ಕೆ.pic.twitter.com/DoRqNtNmGc
ಕೆನರಾ ಬ್ಯಾಂಕ್ ಪ್ರತಿಕ್ರಿಯೆ: ಕನ್ನಡಿಗರ ವಿರೋಧ
ನಮಸ್ಕಾರ, ಉಂಟಾದ ಯಾವುದೇ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ದೂರನ್ನು https://canarites.canarabank.bank.in/GRSCRM ನಲ್ಲಿ ನೋಂದಾಯಿಸಿ ಮತ್ತು ನಮ್ಮ ತಂಡವು ಈ ವಿಷಯವನ್ನು ಪರಿಶೀಲಿಸುತ್ತದೆ. ಅಲ್ಲದೆ, ಭದ್ರತಾ ಕಾರಣಗಳಿಂದಾಗಿ ಶಾಖೆಯ ಆವರಣದಲ್ಲಿ ಛಾಯಾಗ್ರಹಣ/ವಿಡಿಯೋಗ್ರಫಿಯನ್ನು (ಫೋಟೋ ತೆಗೆಯುವುದು ಹಾಗೂ ವಿಡಿಯೋ ಮಾಡುವುದು) ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ದಯವಿಟ್ಟು ತಿಳಿದುಕೊಳ್ಳಿ. ಇದನ್ನು ದುರುಪಯೋಗಪಡಿಸಿಕೊಂಡರೆ ನಿಮ್ಮ ನಡೆಯನ್ನು ಅಥವಾ ವಿಧಾನವನ್ನು ಪ್ರಚೋದನೆ ಎಂದು ಪರಿಗಣಿಸಬಹುದು. ನಮ್ಮ ಕೋರಿಕೆಯ ಮೇರೆಗೆ ದಯವಿಟ್ಟು ಇದನ್ನು ಪುಟದಿಂದ ತೆಗೆದುಹಾಕಿ. ಧನ್ಯವಾದಗಳು! ಎಂದು ಹೇಳಲಾಗಿದೆ.
ವಿಡಿಯೋವನ್ನು ಡಿಲೀಟ್ ಮಾಡಿ ಎಂದು ಪರೋಕ್ಷವಾಗಿ ಕೆನರಾ ಬ್ಯಾಂಕ್ ಹೇಳಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತಿಲ್ಲ. ಕನ್ನಡಿಗರಿಗೆ ಸಮಸ್ಯೆ ಆಗುತ್ತಿದೆ ಎನ್ನುವ ವಿಚಾರವನ್ನು ಕೆನರಾ ಬ್ಯಾಂಕ್ ಗಮನಕ್ಕೆ ತಂದರೆ ಒಂದು ರೀತಿ ಬೆದರಿಕೆಯ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿರುವುದು ಅಕ್ಷಮ್ಯ ಎಂದು ಕನ್ನಡಿಗರು ಹೇಳಿದ್ದಾರೆ.
ಚೈತನ್ ಸೂರ್ಯ ಎನ್ನುವವರು, ನೆಲ ಕನ್ನಡ ನಾಡಿನದ್ದು ಬ್ಯಾಂಕ್ ಖಾತೆ ಕನ್ನಡಿಗರದ್ದು
ನೆಲದ ಭಾಷೆ ಕನ್ನಡ ಆದ್ರೆ, ಸೇವೆ ಸಿಗ್ತಿರೋದು ಮಾತ್ರ ಹಿಂದಿಯಲ್ಲಿ..!
ಆ ಕರೋನ ನಮ್ಮ ಜೀವ ಕಿತ್ಕೊಂಡ್ರೆ.. ಈ ಹಿಂದಿ ನಮ್ಮ ಜೀವನ ಕಿತ್ಕೊಳ್ತಿದೆ. ನನ್ನ ನೆಲದ ಗ್ರಾಮೀಣ ಭಾಗದ ನನ್ನ ತಾಯಂದಿರು ಹಿಂದಿ ಕಲಿತು ವ್ಯವಹಾರ ಮಾಡ್ಬೇಕಾ.? ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಗ್ರಾಹಕ ಒಕ್ಕೂಟ: ಇನ್ನು ಈ ವಿಚಾರವಾಗಿ ಕನ್ನಡ ಗ್ರಾಹಕರ ಒಕ್ಕೂಟವು ಪ್ರತಿಕ್ರಿಯೆ ನೀಡಿದ್ದು, ಕೆನರಾ ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಸಿಗದಿರುವ ಒಂದು ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿದಕ್ಕೆ ಬ್ಯಾಂಕ್ ಅಧಿಕೃತ X ಖಾತೆಯಲ್ಲಿ ಬೆದರಿಕೆ ಹಾಕುವಂತೆ ಸ್ಪಂದಿಸಿದ್ದು ನಿಜಕ್ಕೂ ಅಮಾನವೀಯ ಮತ್ತು ದುರದೃಷ್ಟಕರ.
ಭಾರತ ಸರ್ಕಾರ ಬ್ಯಾಂಕ್ ನಿಯಮಗಳ ಪ್ರಕಾರ ಸ್ಥಳೀಯ ಭಾಷೆಯಲ್ಲಿ ಸೇವೆ ಕೊಡಬೇಕು. ಇದನ್ನು ಆಗ್ರಹಿಸುತ್ತಾ ಇರೋಣ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.












Click it and Unblock the Notifications