ಯುವಕರ ಮತ ಬೇಟೆಗೆ ನಿಂತ ಅನಂತ್ ಕುಮಾರ್, ನಿಲೇಕಣಿ
ಬೆಂಗಳೂರು, ಜ.10 : ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರೆಳಿಸಿರುವ ಕ್ಷೇತ್ರ ಬೆಂಗಳೂರು ದಕ್ಷಿಣ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಆಧಾರ್ ಪ್ರಾಧಿಕಾರದ ಮುಖ್ಯಸ್ಥ ನಂದನ್ ನಿಲೇಕಣಿ ಇಲ್ಲಿ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಉಭಯ ನಾಯಕರು ಕ್ಷೇತ್ರದಲ್ಲಿ ಮತಬೇಟೆಯಾಡಲು ತಮ್ಮ ಸಿದ್ಧತೆ ಆರಂಭಿಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯುವಕರು ಎಲ್ಲಾ ಪಕ್ಷಗಳ ಟಾರ್ಗೆಟ್ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಅನಂತ್ ಕುಮಾರ್ ಮತ್ತು ನಿಲೇಕಣಿ ಸಹ ಯುವಕರ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ. ಆದರೆ, ಯಾರು ಗೆಲವು ಸಾಧಿಸುತ್ತಾರೆ.

ಕ್ಷೇತ್ರದಲ್ಲಿ ಯುವಕರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವಾರು ಐಟಿ ಉದ್ಯಮಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಆದ್ದರಿಂದ ಯುವಕರ ಮತ್ತು ಐಟಿ ಮಂದಿಯ ಮನ ಗೆದ್ದವರು ನೇರವಾಗಿ ಸಂಸತ್ ಭವನ ಪ್ರವೇಶ ಮಾಡಲಿದ್ದಾರೆ. ಅನಂತ್ ಕುಮಾರ್ ಹಾಲಿ ಸಂಸದರು, ಆದರೆ, ನಿಲೇಕಣಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. [ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲೇಕಣಿ ಸ್ಪರ್ಧೆ]
ಸಂಸದ ಅನಂತ್ ಕುಮಾರ್ ಈಗಾಗಲೇ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸುವ ಮೂಲಕ ಯುವಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಕ್ರಿಕೆಟ್ ಟೂರ್ನಿಗೆ ಅನಂತ್-ಮೋದಿ ಟ್ರೋಫಿ ಎಂದು ನಾಮಕರಣ ಮಾಡಿ ಮೋದಿ ಮೋಡಿಯನ್ನು ಜೊತೆಗೆ ಸೇರಿಸಿದ್ದಾರೆ. ಕ್ರಿಕೆಟ್ ಟೂರ್ನಿಯಲ್ಲಿಯೂ ನರೇಂದ್ರ ಮೋದಿ ಅವರ ಹೆಸರು ಬಳಸಿಕೊಂಡಿದ್ದಾರೆ.
ಅನಂತ್ ಕುಮಾರ್ ಯುವಕರನ್ನು ಸೆಳೆಯಲು ಕಾರಣವು ಇದೆ. 1999ರ ಚುನಾವಣೆಯಲ್ಲಿನ ಮತ ಹಂಚಿಕೆಯನ್ನು ಗಮನಿಸಿದರೆ ಅನಂತ್ ಕುಮಾರ್ ಅವರಿಗೆ 53ರಷ್ಟ ಮತಗಳು ಬಂದಿದ್ದವು. 2009ರ ಚುನಾವಣೆಯಲ್ಲಿ ಅದು ಕಡಿಮೆಯಾಗಿ 48.2ಕ್ಕೆ ಕುಸಿದಿತ್ತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಅನಂತ್ ಚುನಾವಣೆ ಮೇಲೆ ಹೆಚ್ಚು ಗಮನ ವಹಿಸಿದ್ದಾರೆ.
ನಂದನ್ ನಿಲೇಕಣಿ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ, ಸಮಾಜದಲ್ಲಿ ಉತ್ತಮ ಹೆಸರುಗಳಿಸಿರುವ ಅವರು ಆಧಾರ್ ಪ್ರಾಧಿಕಾರದ ಮುಖ್ಯಸ್ಥರಾದ ನಂತರ ಜನರಿಗೆ ಚಿರಪರಿಚಿತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದ ಇನ್ಫೋಸಿಸ್ ಮಾಜಿ ಸಿಇಓ ವಿ ಬಾಲಕೃಷ್ಣನ್ ಸಹ ನಂದನ್ ನಿಲೇಕಣಿ ಅವರಿಗ ಬೆಂಬಲ ಘೊಷಿಸಿದ್ದಾರೆ.
ದೇಶಕ್ಕೆ ನಿಲೇಕಣಿ ಅಂತಹ ಅಭ್ಯರ್ಥಿಗಳ ಅಗತ್ಯವಿದೆ, ನಿಲೇಕಣಿ ಅವರು ಚುನಾವಣೆಗೆ ಸ್ಪರ್ಧಿಸಿದರೆ ತಾವು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ. ನಂದನ್ ನಿಲೇಕಣಿ ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅ ಅಂಶಗಳು ಸಹ ಚುನಾವಣೆಯಲ್ಲಿ ಸಹಾಯಕವಾಗಬಹುದು.
ನಂದನ್ ನಿಲೇಕಣಿ ಐಟಿ ಉದ್ಯಮದೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ ಆದ್ದರಿಂದ ಅದು ಚುನಾವಣೆ ವೇಲೆ ಅವರ ಬೆಂಬಲಕ್ಕೆ ಬರಬಹುದು. ಐಟಿ ಉದ್ಯಮಿಗಳು, ಉದ್ಯೋಗಿಗಳಿ ನಿಲೇಕಣಿ ಅವರಿಗೆ ಮತ ನೀಡಬಹುದು. ಅನಂತ್ ಕುಮಾರ್ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತರು, ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದಾರೆ ಇಂತಹ ಅಂಶಗಳು ಅವರನ್ನು ಚುನಾವಣೆಯಲ್ಲಿ ಬೆಂಬಲಿಸಬಹುದು.
ನಂದನ್ ನಿಲೇಕಣಿ ಗುರುವಾರ ಕೆಲವು ಯುವಕರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇಂದಿನ ಯುವ ಪೀಳಿಗೆಗೆ ವ್ಯವಸ್ಥೆ ಬಗ್ಗೆ ಇರುವ ಆಕ್ರೋಶಗಳನ್ನು ಅವರೊಂದಿಗೆ ಚರ್ಚಿಸಿ ತಿಳಿದುಕೊಂಡಿದ್ದಾರೆ. ಶುಕ್ರವಾರ ಸಹ ನಗರದ ಕ್ರೈಸ್ಟ್ ಕಾಲೇಜಿನಲ್ಲಿ ನಂದನ್ ನಿಲೇಕಣಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. [ನಂದನ್ ನಿಲೇಕಣಿ ಬ್ಲಾಗ್ ಓದಿ]
ಉಭಯ ನಾಯಕರು ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳಲ್ಲಿ ಚುನಾವಣೆ ಅಧಿಕೃವಾಗಿ ಘೋಷಣೆಯಾಗಲಿದೆ. ಈ ಇಬ್ಬರು ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಇತರೆ ಪಕ್ಷಗಳು ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತದೆ ಎಂಬ ಕುತುಹಲವೂ ಇದೆ.












Click it and Unblock the Notifications