ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಜಲಮಂಡಳಿ ಗುಡ್ ನ್ಯೂಸ್
ಬೆಂಗಳೂರು, ಮೇ 28: ಬೆಂಗಳೂರಿನಲ್ಲಿ ಜಲಮಂಡಳಿಯು ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 'ಸಂಚಾರಿ ಕಾವೇರಿ' ಆರಂಭಿಸಿದೆ. ನಗರದೊಳಗಿನ ಹಾಗೂ ಹೊರ ವಲಯದ ಅಪಾರ್ಟ್‌ಮೆಂಟ್‌ಗಳು ಹೆಚ್ಚು ಅಂತರ್ಜಲ ಅವಲಂಬಿಸಿವೆ. ಬೋರವೆಲ್ ನೀರನ್ನು ಆಧರಿಸಿವೆ. ಇದರಿಂದ ಅಂತರ್ಜಲ ಕುಸಿಯುವ ಸಾಧ್ಯತೆ ಇರುವ ಕಾರಣ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹೊಸ ಪ್ಲಾನ್ ಮಾಡಿಕೊಂಡಿದೆ.
ನಗರದ ಅಂತರ್ಜಲದ ಮೇಲೆ ಒತ್ತಡ ಕಡಿಮೆ ಮಾಡಲು ಜಲಮಂಡಳಿಯು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ 'ಸಂಚಾರಿ ಕಾವೇರಿ' ಮೂಲಕ ನೀರಿಗಾಗಿ ಬಲ್ಕ್‌ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಇದರಿಂದ ನೀವು ಅಂತರ್ಜಲದ ಬದಲಾಗಿ ಜಲಮಂಡಳಿ ಪೂರೈಸುವ ಪ್ರಮಾಣೀಕೃತ ನೀರನ್ನು ಸುದೀರ್ಘ ಅವಧಿಗೆ ಬಳಸಬಹುದಾಗಿದೆ.

ಅಂತರ್ಜಲದ ಅತಿಯಾದ ಅವಲಂಬನೆ ಕಡಿಮೆಗೊಳಿಸಿ ನಗರದಲ್ಲಿ ಜಲ ಸಮತೋಲನ ಕಾಪಾಡುವ ನಿಟ್ಟಿನಲ್ಲಿ BWSSB ನಿರಂತರ ಹೊಸ ಹೊಸ ಉಪಕ್ರಮ ಕೈಗೊಳ್ಳುತ್ತಲೇ ಇರುತ್ತದೆ. ಅದರ ಮುಂದುವರಿದ ಭಾಗವಾಗಿ "ಸಂಚಾರಿ ಕಾವೇರಿ" ಜಾರಿ ಮಾಡಿದ್ದು, ಈ ಯೋಜನೆಯಡಿ ಅಪಾರ್ಟ್‌ಮೆಂಟ್‌ಗಳಿಗೆ ಬಲ್ಕ್ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲು ಮುಂದಾಗಿದೆ ಎಂದು ಎಂದು ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಂಗಳವಾರ ತಿಳಿಸಿದರು.
ಬೆಂಗಳೂರು ಹೊರ ವಲಯದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ಬೋರವೆಲ್ ನೀರು ಬಳಸುತ್ತವೆ. ಅದು ಸಾಕಾಗದಿದ್ದಾಗ ಅಪಾರ್ಟ್ಮೆಂಟ್ ಜನರು ತಮ್ಮ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಟ್ಯಾಂಕರ್ ನೀರಿನ ಖರೀದಿಗೆ ಮುಂದಾಗುತ್ತಾರೆ. ವಿಪರ್ಯಾಸವೆಂದರೆ ಟ್ಯಾಂಕರ್ ನೀರು ಪೂರೈಕೆಯು ಸಹ ಕೊಳವೆ ಬಾವಿಗಳಿಂದ ಸಂಗ್ರಹಿಸುವಂತಹ ನೀರನ್ನೇ ಅವಲಂಬಿಸಿವೆ. ಅದರಿಂದಲೂ ಅಂತರ್ಜಲ ಕುಸಿಯುತ್ತದೆ.
ಅಂತರ್ಜಲದ ಮೇಲಿನ ಅವಲಂಬನೆ ನಿರಂತರವಾಗಿ ಮುಂದುವರಿದರೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡುವ ಹಾಗೂ ಬಿಐಎಸ್ BIS ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ BWSSB ಈ ಹೊಸ ನಿರ್ಧಾರ ಕೈಗೊಂಡಿದೆ. ಅಪಾರ್ಟ್‌ಮೆಂಟ್‌ಗಳು ತಮ್ಮ ವರ್ಷಾವಧಿಯ ನೀರಿನ ಅಗತ್ಯಕ್ಕಾಗಿ BWSSB ಯ BIS ಪ್ರಮಾಣಿತ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶ ನೀಡುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಜಲಮಂಡಳಿ ಕೋರಿದೆ.
ಬುಕ್ಕಿಂಗ್ ಹೇಗಿರುತ್ತದೆ?
* ಮೊದಲು ಬಂದವರಿಗೆ ಮೊದಲು ಅವಕಾಶ (First Come, First Serve) ಆಧಾರಿತ ಬುಕ್ಕಿಂಗ್
* ಕನಿಷ್ಠ ಒಂದು ತಿಂಗಳ ಮುಂಗಡ ಪಾವತಿ ಅವಶ್ಯಕ
* ಬಲ್ಕ್ ಬುಕ್ಕಿಂಗ್ ಮೂಲಕ ನಿರಂತರ ಸರಬರಾಜು ಖಚಿತಪಡಿಸಿಕೊಳ್ಳುವ ವ್ಯವಸ್ಥೆ
* ಒಂದು ವರ್ಷ ಅವಧಿಗೆ ಬುಕ್ಕಿಂಗ್ ಮಾಡುವ ವ್ಯವಸ್ಥೆ ಲಭ್ಯ
ಸಂಚಾರಿ ಕಾವೇರಿ ಯೋಜನೆಯು ಭಾರತದ ಮೊದಲ ತಾಂತ್ರಿಕ ವ್ಯವಸ್ಥೆಯ ಟ್ಯಾಂಕರ್ ಯೋಜನೆಯಾಗಿದೆ. GPS ನಿಯಂತ್ರಣ, ಪೂರೈಕೆ ಶ್ರೇಣೀಕರಣ ಮತ್ತು ಪೂರೈಕೆ ನಿಯಂತ್ರಣ ಕೇಂದ್ರಗಳ ಮೂಲಕ ನಗರವನ್ನು ಅವಶ್ಯಕ ನೀರಿನಿಂದ ಲಭ್ಯವಾಗುವಂತೆ ಮಾಡಲಾಗುತ್ತಿದೆ.
BWSSB ಜನಪರ ಜಲಮಂಡಳಿಯಾಗಿ ಬದಲಾಗುತ್ತಿದೆ. ನಮ್ಮ ಗುರಿ ಬೆಂಗಳೂರಿನ ಮುಂದಿನ ಪೀಳಿಗೆಗೆ ಭದ್ರ ನೀರಿನ ಭವಿಷ್ಯವನ್ನು ಕಟ್ಟಿಕೊಡುವುದಾಗಿದೆ. ಈ ನಿಟ್ಟಿನಲ್ಲಿ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅಪಾರ್ಟ್‌ಮೆಂಟ್‌ಗಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಯ ಸದ್ಬಳಕೆಯನ್ನು ಮಾಡಿಕೊಳ್ಳುವ ಮೂಲಕ ಬಿಐಎಸ್ ಪ್ರಮಾಣಿಕೃತ ನೀರಿನ್ನು ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಮಾಹಿತಿ ನೀಡಬೇಕು ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.












Click it and Unblock the Notifications