BWSSB: ಏಪ್ರಿಲ್1ರಿಂದ ಹೋಟೆಲ್‌ಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರು
ಬೆಂಗಳೂರು, ಮಾರ್ಚ್ 22: ಜನರು ಹೆಚ್ಚು ಬಂದು ಹೋಗುವ ಹೋಟೆಲ್, ರಸ್ಟೋರೆಂಟ್‌ಗಳಲ್ಲಿ ನೀರಿನ ಬಳಕೆ ಹೆಚ್ಚಿರುತ್ತದೆ. ಇಲ್ಲಿ ಏರಿಯೇಟರ್ ಅಳವಡಿಸಬೇಕು. ಸ್ವಚ್ಚತೆಗಾಗಿ ಸಂಸ್ಕರಿಸಿದ ನೀರು ಬಳಸುವಂತೆ ತಿಳಿಸಿರುವ ಬೆಂಗಳೂರು ಜಲಮಂಡಳಿಯು ರಿಯಾಯಿತಿ ದರದಲ್ಲಿ ನೀರು ಪೂರೈಕೆ ಮಾಡುವುದಾಗಿ ತಿಳಿಸಿದೆ.
ಬೆಂಗಳೂರಿನಲ್ಲಿ ಜಲಮಂಡಳಿ (BWSSB) ಕಚೇರಿಯಲ್ಲಿ ನಡೆದ ಹೊಟೇಲ್ ಮಾಲೀಕರು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿದರು.

ಹೆಚ್ಚು ನೀರು ಬಳಕೆ ಮಾಡುವ ಹಾಗೂ ಫ್ಲೋಟಿಂಗ್ ಜನಸಂಖ್ಯೆ ಹೆಚ್ಚಾಗಿರುವ ಹೋಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ನೀರಿನ ಉಳಿತಾಯ ಬಹಳ ಮುಖ್ಯ. ಸ್ವಚ್ಛತೆ ಇನ್ನಿತರ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರನ್ನು ಬಳಬೇಕು. ಸ್ವಚ್ಚತಾ ಕಾರ್ಯಗಳಿಗೆ ಬಳಸಲು ಏಪ್ರಿಲ್ 1 ರಿಂದ ಹೋಟೇಲ್‌ಗಳಿಗೆ ರಿಯಾಯತಿ ದರದಲ್ಲಿ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಅಮೂಲ್ಯ ಸಂಪತ್ತು ಪೋಲು ಮಾಡದಿರಲು ಸಹಕರಿಸಿ
ನಗರಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ. ನೀರಿನ ಉಳಿತಾಯದಿಂದ ನಿಮ್ಮ ನೀರಿನ ಬಿಲ್ ಕೂಡಾ ಉಳಿತಾಯವಾಗುತ್ತದೆ. ನೀರು ಉಚಿತ ಎನ್ನುವ ಭಾವನೆಯಿಂದ ಜನರು ಅಮೂಲ್ಯ ಸಂಪತ್ತನ್ನ ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಕೋರಿದರು.

ಕುಡಿಯುವ ಉದ್ದೇಶಕ್ಕೆ ಹೊರತು ಪಡಿಸಿ ಸಂಸ್ಕರಿಸಿದ ನೀರನ್ನ ಬಹಳಷ್ಟು ಇತರ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬೆಂಗಳೂರು ಜಲಮಂಡಳಿ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಕೈಜೋಡಿಸಲು ಸಿದ್ದವಿದೆ. ಅಗತ್ಯವಿರುವ ಹೋಟೇಲ್ ಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಕರಿಸಿದ ನೀರನ್ನ ನಿಮ್ಮ ಬಾಗಿಲಿಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ.
ಈ ಬಗ್ಗೆ ಸಂಘದ ಪದಾಧಿಕಾರಿಗಳು ತಮ್ಮ ಸದಸ್ಯರುಗಳಿಗೆ ಮಾಹಿತಿ ನೀಡಬೇಕು. ಝೋನ್ ವೈಸ್ ಸಭೆಯನ್ನು ನಡೆಸಿದಲ್ಲಿ ನಾನು ಮಾಲೀಕರಿಗೆ ಖುದ್ದು ಮನವಿ ಮಾಡಬೇಕಿದೆ ಎಂದರು.
ವಾಟರ್ ಸೇವ್ ಸ್ಟಿಕ್ಕರ್
ಹೋಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ನೀರು ಉಪಯೋಗವಾಗುವ ಕಡೆಗಳಲ್ಲಿ ನೀರಿನ ಉಳಿತಾಯದ ಸ್ಟಿಕ್ಕರ್ ಗಳನ್ನು ಅಳವಡಿಸಲು ಜಲಮಂಡಳಿಯ ವತಿಯಿಂದ ಸ್ಟಿಕ್ಕರ್ ಒದಗಿಸುವಂತೆ ಹೋಟೇಲ್ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷರು ಶೀಘ್ರದಲ್ಲೇ ಜಲಮಂಡಳಿ ವತಿಯಿಂದ ಸ್ಟಿಕ್ಕರ್ ಒದಗಿಸಲಾಗುವುದು ಎಂದು ಹೇಳಿದರು.
ನೀರು ರಕ್ಷಣೆ: ಗ್ರೀನ್ ಸ್ಟಾರ್ ರೇಟಿಂಗ್
ಪ್ರಸ್ತುತ ಸನ್ನಿವೇಶದಲ್ಲಿ ನೀರನ್ನು ಮಿತವ್ಯಯವಾಗಿ ಬಳಸಬೇಕು. ಈ ನಿಟ್ಟಿನಲ್ಲಿ ನೀರು ಹೆಚ್ಚು ಉಳಿತಾಯ, ಮರುಬಳಕೆ ಹಾಗೂ ಅಂತರ್ಜಲ ಅಭಿವೃದ್ದಿಗೆ ಕೊಡುಗೆ ನೀಡುವಂತಹ ಹೋಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ಜಲಮಂಡಳಿ ಹೇಳಿದೆ.. ಈಗಾಗಲೇ ಮಂಡಳಿಯ ಬಳಿ ನೀರು ಬಳಕೆಯ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಮುಂದಿನ ತಿಂಗಳುಗಳಲ್ಲಿ ಉಳಿತಾಯದ ಮಾಹಿತಿ ಪಡೆದುಕೊಂಡು ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಹೋಳಿ ಹಬ್ಬದ ಆಚರಣೆ ಮಾಡಬಹುದು. ಆದರೆ ನೀರು ಬಳಕೆ ಆಗುವ ರೈನ್ ಡ್ಯಾನ್ಸ್ ಇಲ್ಲವೇ ಪೂಲ್ ಡ್ಯಾನ್ಸ್ ಆಯೋಜನೆ ಬೇಡ. ಆಚರಣೆಗೆ ಕಾವೇರಿ ನೀರು, ಕೊಳವೆ ಬಾವಿ ನೀರು ಬಳಕೆ ನಿಷೇಧಿಸಲಾಗಿದೆ. ನೀರು ಪೋಲು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.












Click it and Unblock the Notifications