ಬೆಂಗಳೂರು ಜನರಿಗಾಗಿ 1 ವಾರ ವಿಶೇಷ ಅಭಿಯಾನ, BWSSBಗೆ ರೇಡಿಯೋ ಮಿರ್ಚಿ ಸಾಥ್
ಬೆಂಗಳೂರು ಮೇ 13: ದೂರದ ಪ್ರದೇಶದಿಂದ ಕಿಲೋ ಮೀಟರ್‌ಗಟ್ಟಲೇ ಪೈಪ್‌ಲೈನ್ ಹಾಕಿ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಬೆಂಗಳೂರಿನ ಜನರಿಗೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ರೇಡಿಯೋ ಮಿರ್ಚಿ ಸಹಕಾರ ನೀಡಿದೆ. ಗ್ರಾಹಕರು ದೂರುಗಳನ್ನು ಸಲ್ಲಿಸಬಹುದಾಗಿದೆ.
ನೀರಿನ ಸಮರ್ಪಕ ಬಳಕೆ, ಉಳಿತಾಯ ಹಾಗೂ ಪ್ರತಿಯೊಂದು ಹನಿ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ರೇಡಿಯೋ ಮಿರ್ಚಿಯ ಜೊತೆಗೂಡಿ ಒಂದು ವಾರ ಕಾಲ ಅಭಿಯಾನ ನಡೆಸಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅವರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಜಲಮಂಡಳಿ ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಸಮರ್ಪಕ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ನಿಭಾಯಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಜಲಮಂಡಳಿ ಇನ್ನಷ್ಟು ಜನಪರ - ಜನರಿಗೆ ಸುಲಭವಾಗಿ ಲಭ್ಯವಾಗುವಂತಹ ನಿಟ್ಟಿನಲ್ಲಿ ಹಾಗೆಯೇ ನೀರಿನ ಸಮರ್ಪಕ ಬಳಕೆ ಮತ್ತು ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
1 ವಾರ 'ಜನಪರ ಜಲಮಂಡಳಿ' ಅಭಿಯಾನ
ಸದ್ಯ ರೆಡಿಯೋ ಮಿರ್ಚಿ ಅವರ ಸಹಕಾರದಲ್ಲಿ 'ಜನಪರ ಜಲಮಂಡಳಿ' ಅಭಿಯಾನ ನಡೆಸಲಿದ್ದೇವೆ. ಮೇ 12 ರಿಂದ ಒಂದು ವಾರದ ಕಾಲ ರೆಡಿಯೋ ಮಿರ್ಚಿ ಮೂಲಕ ದಾಖಲಾಗುವಂತಹ ದೂರುಗಳಿಗೆ ಪರಿಹಾರ ನೀಡಲಿದ್ದೇವೆ. ಜನರ ಸಮಸ್ಯೆಗಳಿಗೆ ಉತ್ತರ ಒದಗಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.
ಬೇಸಿಗೆಯ ಸಮಯದಲ್ಲಿ ನೀರಿನ ಸಮರ್ಪಕ ಬಳಕೆ ಮಾಡುವುದು ಬಹಳ ಪ್ರಮುಖ ಅಂಶವಾಗಿದೆ. ಅದರಲ್ಲೂ ಬೆಳೆಯುತ್ತಿರುವ ನಗರ ಗ್ರೇಟರ್ ಬೆಂಗಳೂರು ನಗರದ ದಾಹ ತಣಿಸುವುದು ಸಣ್ಣ ಕಾರ್ಯವಲ್ಲ. ಇಂತಹ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಜಲಮಂಡಳಿ, ದೂರದ ಕಾವೇರಿ ನದಿಯಿಂದ ನಗರಕ್ಕೆ ನೀರನ್ನು ಪೂರೈಸುತ್ತಿದೆ. ಈ ನೀರಿನ ಪ್ರತಿ ಹನಿಯೂ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಅವರು ತಿಳಿಸಿದರು.
ದೂರುಗಳಿಗೆ ವಾಟ್ಸಾಪ್ ಮಾಡಿ
ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇದಾಗಿದೆ. ಜನಜಾಗೃತಿಯ ಜೊತೆಯಲ್ಲಿಯೇ ಜನರ ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ವಾರದ ಅಭಿಯಾನ ನಡೆಸಲಾಗುತ್ತದೆ. ಜನರು ತಮ್ಮ ದೂರುಗಳನ್ನು 9833583983 ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ತಿಳಿಸಬಹುದಾಗಿದೆ. ಈ ದೂರಗಳನ್ನು ರೆಡಿಯೋ ಮಿರ್ಚಿ ತಂಡ ಬೆಂಗಳೂರು ಜಲಮಂಡಳಿಯ ಜೊತೆಗೂಡಿ ಪರಿಹಾರ ದೊರಕಿಸುವ ಪ್ರಯತ್ನ ನಮ್ಮದಾಗಿದೆ ಎಂದು ರೆಡಿಯೋ ಮಿರ್ಚಿ ಸಂಸ್ಥೆ ಹೇಳಿದೆ ಎಂದು ಜಲಮಂಡಳಿಯ ಪ್ರಕಟಣೆ ತಿಳಿಸಿದೆ.












Click it and Unblock the Notifications