ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಜಲಮಂಡಳಿ ಪ್ರತಿ ದಿನ 10 ಎಂ.ಎಲ್.ಡಿ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡ ಕಾಮಗಾರಿಗೆ ಉತ್ತಮ ಗುಣಮಟ್ಟದ ನೀರು ಒದಗಿಸಲು ಸಿದ್ದವಿದೆ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಕ್ರೆಡೈ (Confederation of Real Estate Developerś Association of India) ಕರ್ನಾಟಕ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಟ್ಟಡ ಕಾಮಗಾರಿಗಳಿಗೆ ಅಗತ್ಯವಿರುವ ನೀರಿನ ಬೇಡಿಕೆಯ ಮಾಹಿತಿ ನೀಡಬೇಕು. ಅವರಿಗೆ ಪ್ರತಿ ನಿತ್ಯ 10 ಎಂ.ಎಲ್.ಡಿ ಸಂಸ್ಕರಿಸಿದ ನೀರು ಪೂರೈಸಲು ನಾವು ಸಿದ್ಧ ಎಂದರು. ಜಲಮಂಡಳಿಯ ಈ ಭರವಸೆಯಿಂದ ಕ್ರೆಡೈ ಬೆಂಗಳೂರು ಹರ್ಷ ವ್ಯಕ್ತಪಡಿಸಿದೆ.
ಗುಣಮಟ್ಟದ ನೀರಿಗೆ ಹೆಚ್ಚು ಹಣ ನೀಡಲು ಸಿದ್ಧ
ನೀರಿನ ಅಭಾವ ಕಟ್ಟಡ ಕಾಮಗಾರಿಗಳಿಗೆ ತಟ್ಟದೇ ಇರುವ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದ ಜಲಮಂಡಳಿಯ ಕಾರ್ಯಕ್ಕೆ ಕ್ರೆಡೈ ಬೆಂಗಳೂರಿನ ಅಧ್ಯಕ್ಷರಾದ ರಾಮ್ ಮೈಸೂರು ಶ್ಲಾಘಿಸಿದರು. ಕಟ್ಟಡ ಕಾಮಗಾರಿಗಳಿಗೆ ಸಂಸ್ಕರಿಸಿದ ನೀರು ನೀಡುವ ಉದ್ದೇಶ ಬಹಳ ಉತ್ತಮವಾಗಿದೆ. ನಮಗೆ ನೀಡುತ್ತಿರುವ ನೀರಿನ ಬೆಲೆ ಬಹಳ ಕಡಿಮೆಯಿದೆ, ನಾವು ಉತ್ತಮ ಗುಣಮಟ್ಟದ ನೀರಿಗೆ ಇನ್ನೂ ಹೆಚ್ಚಿನ ದರ ನೀಡಲು ಸಿದ್ದರಿದ್ದೇವೆ.

ಆದರೆ, ನೀರು ಸಾಗಾಣಿಕೆ ಹಾಗೂ ಸಂಗ್ರಹದ್ದೇ ಸಮಸ್ಯೆ. ನಮಗೆ ದೊರಕುತ್ತಿರುವ ಸಂಸ್ಕರಿಸಿದ ಬಹುತೇಕ ನೀರು ಉತ್ತಮ ಗುಣಮಟ್ಟದ್ದಾಗಿದೆ. ಆದರೆ ಕೆಲವು ಸಂಧರ್ಭದಲ್ಲಿ ಕ್ಲೋರೀನ್ ನಂತಹ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಹೆಚ್ಚು ಬೇಡಿಕೆ ಇರುವ ಕಡೆಗಳಲ್ಲಿ ಪೈಪ್‌ಲೈನ್ ಮೂಲಕ ಸಂಸ್ಕರಿಸಿದ ನೀರು ಸರಬರಾಜು ನೀಡುವಂತೆ ಅವರು ಮನವಿ ಮಾಡಿದರು.
ಸಂಸ್ಕರಿಸಿದ ನೀರು ಲಭ್ಯತೆಯ ಬಗ್ಗೆ ವರದಿ
ಕ್ರೆಡೈ ಹಾಗೂ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಮಧ್ಯೆ ಫೆಸಿಲಿಟೇಟರ್ ಆಗಿ ಜಲಮಂಡಳಿ ಕಾರ್ಯ ನಿರ್ವಹಿಸುತ್ತಿರುವುದು ಬಹಳ ಖುಷಿಯ ವಿಷಯ. ಜಲಮಂಡಳಿ ಅಧ್ಯಕ್ಷರು ಸೂಚಿಸಿದಂತೆ ವಲಯವಾರು ಸಂಸ್ಕರಿಸಿದ ನೀರಿನ ಲಭ್ಯತೆಯ ಬಗ್ಗೆ ಶೀಘ್ರದಲ್ಲೇ ವರದಿಯನ್ನು ನೀಡಲಾಗುವುದು.
ನೀರಿನ ಅಭಾವದ ಸಂಧರ್ಭದಲ್ಲಿ ಜಲಮಂಡಳಿ ನಮ್ಮ ಜೊತೆಗೆ ನಿಂತಿದ್ದು, ನಮ್ಮ ಸದಸ್ಯ ಬಳಕೆದಾರರ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದೆ. ನಮ್ಮಲ್ಲಿ ಲಭ್ಯವಿರುವ ಹೆಚ್ಚುವರಿ ನೀರು ಮಾರಾಟ ಮಾಡಲು ಅವಕಾಶ ನೀಡಿರುವುದು ಬಹಳ ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪ್ರತಿ ದಿನ ನೀರು ಪೂರೈಕೆಗೆ ವ್ಯವಸ್ಥೆ
ಬೆಂಗಳೂರು ಜಲಮಂಡಳಿ ಬಳಿ ಸುಮಾರು 1,200 ಎಂ.ಎಲ್.ಡಿ ಯಷ್ಟು ಸಂಸ್ಕರಿಸಿದ ನೀರಿನ ಲಭ್ಯತೆಯಿದೆ. ಈ ನೀರನ್ನು ಅಗತ್ಯ ಇರುವ ಕಡೆಗಳಲ್ಲಿ ಸರಬರಾಜು ಮಾಡುವ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಪ್ರಸ್ತುತ ಟ್ಯಾಂಕರ್ ಗಳ ಮೂಲಕ ಪ್ರತಿ ದಿನ 10 ಎಂ.ಎಲ್.ಡಿ ಯಷ್ಟು ನೀರು ಸರಬರಾಜು ಮಾಡಬಹುದಾಗಿದೆ. ಇನ್ನೂ ಹೆಚ್ಚಿನ ಟ್ಯಾಂಕರ್‌ಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮುಂದುವರೆದಿದೆ.
ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಸರಬರಾಜು ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಥರ್ಡ್ ಪಾರ್ಟಿ ಪ್ರಯೋಗಾಲಯದ ಮೂಲಕ ಲಭ್ಯವಿರುವ ಅಪಾರ್ಟ್‌ಮೆಂಟ್‌ಗಳ ನೀರನ್ನು ಪರಿಶೀಲಿಸಿ ಪ್ರಮಾಣ ಪತ್ರವನ್ನು ನೀಡಲಾಗುವುದು. ದೊಡ್ಡ ಪ್ರಾಜೆಕ್ಟ್ ನಡೆಸುತ್ತಿರುವ ಸಂಸ್ಥೆಗಳು ಬಲ್ಕ್ ನೀರಿನ ಬೇಡಿಕೆ ನೀಡಿದಲ್ಲಿ ಅವರ ಅಗತ್ಯತೆ 1ರಿಂದ 2 ಕಿ.ಮಿ ಒಳಗಾಗಿ ಪೈಪ್‌ಲೈನ್ ಅಳವಡಿಕೆ ಮಾಡಲಾಗುವುದು ಎಂದು ಜಲಮಂಡಳಿ ತಿಳಿಸಿದೆ.
ಸಭೆಯಲ್ಲಿ ಕ್ರೆಡೈ ಬೆಂಗಳೂರಿನ ಅಧ್ಯಕ್ಷರಾದ ರಾಮ್ ಮೈಸೂರು, ಬಿಎಎಫ್ ಅಧ್ಯಕ್ಷರಾದ ವಿಕ್ರಮ್ ರಾಯ್, ಪದಾಧಿಕಾರಿಗಳಾದ ಸತೀಶ್ ಮಲ್ಯ ಹಾಗೂ ಅರುಣ್‌ಕುಮಾರ್ ಪಾಲ್ಗೊಂಡಿದ್ದರು.












Click it and Unblock the Notifications