ಬೆಂಗಳೂರಲ್ಲಿ ಬೋರ್‌ವೆಲ್ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ
ಬೆಂಗಳೂರು, ಮಾರ್ಚ್ 19: ಬೇಸಿಗೆ ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಮಧ್ಯ ಭಾಗದಲ್ಲಿದ್ದೇವೆ. ಇನ್ನೂ ಮುಂದೆ ದೀರ್ಘ ಬೇಸಿಗೆ ಎದುರು ನೋಡುತ್ತಿದ್ದೇವೆ. ಈ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಸಂಬಂಧ ಬೆಂಗಳೂರು ಜಲಮಂಡಳಿಯು ಕೊಳವೆ ಬಾವಿಗಳ ನಿರ್ವಹಣೆಗೆ ತಂತ್ರಜ್ಞಾನ ಮೊರೆ ಹೋಗಿದೆ.
ಹೌದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೊಳವೆ ಬಾವಿಗಳ ಸಮರ್ಪಕ ನಿರ್ವಹಣೆಗಾಗಿ ಆಧುನಿಕ ರೋಬೋಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸೂಚಿಸಿದ್ದಾರೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಕೊಳವೆ ಬಾವಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಅವರು ಮಾತನಾಡಿದರು. ಕೊಳವೆ ಬಾವಿಗಳ ಬಗ್ಗೆ ಅವರು ಸಮಗ್ರ ಮಾಹಿತಿ ಪಡೆದರು. ನಗರದಲ್ಲಿ ಜಲಮಂಡಳಿಯ 11 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಕೊಳವೆ ಬಾವಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ.
ನೀರಿಲ್ಲದೇ ಮೋಟಾರ್ ಚಾಲನೆ; ಸಮಸ್ಯೆ
ಕೆಲವೆಡೆ ತಾಂತ್ರಿಕ ತೊಂದರೆ ಇರುವ ಕಾರಣದಿಂದ ಕೊಳವೆ ಬಾವಿಗಳ ಬಳಕೆ ಆಗುತ್ತಿಲ್ಲ. ಇವುಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಬಳಕೆ ಅಸಾಧ್ಯವಾಗಿದೆ. ಕೊಳವೆ ಬಾವಿಯ ಪಂಪ್ ಸೆಟ್‌ಗಳನ್ನ ಹೆಚ್ಚಿನ ಸಮಯ ಬಳಲಾಗುತ್ತಿದೆ ಎಂದರು.

ನೀರು ಇಲ್ಲದೇ ಮೋಟಾರ್ ಓಡಿಸುವುದರಿಂದ ಬಹಳಷ್ಟು ತಾಂತ್ರಿಕ ಸಮಸ್ಯೆ ಆಗುತ್ತಿದೆ. ಇವುಗಳನ್ನ ಸರಿಯಾದ ಸಮಯದಲ್ಲಿ ರಿಪೇರಿ ಮಾಡುವುದು ಸಾಧ್ಯವಾಗುತ್ತಿಲ್ಲ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸುವಂತೆ ಅವರು ಅಧಿಕಾರಿಗಳಿಗೆ ಹೇಳಿದರು.
ಆಟೋಮ್ಯಾಟಿಕ್ ವ್ಯವಸ್ಥೆ
ಈ ಆಧುನಿಕ ತಂತ್ರಜ್ಞಾನದಿಂದ ಪಂಪ್‌ಸೆಟ್‌ಗಳ ಮಾಹಿತಿ, ನೀರಿನ ಹರಿವಿನ ಮಾಹಿತಿ, ದುರಸ್ಥಿಯ ಮಾಹಿತಿ ಸೇರಿದಂತೆ ಆಟೋಮ್ಯಾಟಿಕ್ ಆಗಿ ಸ್ವಿಚ್ ಆನ್ ಮತ್ತು ಸ್ವಿಚ್ ಆಫ್ ಮಾಡುವುದು ಸಾಧ್ಯವಾಗುತ್ತದೆ.
ಜಲಮಂಡಳಿಗೆ ಮಾಹಿತಿ ದೊರೆಯುವದಲ್ಲದೇ ನೀರಿಲ್ಲದೇ ಇದ್ದಾಗ ಮೋಟಾರ್ ಸ್ವಯಂ ಚಾಲಿತವಾಗಿ ಆಫ್ ಆಗುವಂತೆಯೂ ಮಾಡಬಹುದು. ಇದರಿಂದ ಆಗಾಗ್ಗೆ ದುರಸ್ಥಿಗೆ ಬರುವುದು ತಪ್ಪುವುದಲ್ಲದೇ ಸಾರ್ವಜನಿಕರಿಗೂ ತೊಂದರೆ ಆಗುವುದು ಕಡಿಮೆ ಆಗುತ್ತದೆ ಎಂದರು.
ಅಂತರ್ಜಲ ಕುಸಿತದಿಂದ ಸಾಕಷ್ಟು ಸಮಸ್ಯೆ
ಅಂತರ್ಜಲ ಕುಸಿತ ಆಗಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಕುಸಿಯುತ್ತಿದೆ. ಈ ಕೊಳವೆ ಬಾವಿಗಳನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳು, ಅವುಗಳಲ್ಲಿನ ನೀರಿನ ಲಭ್ಯತೆ, ರಿಪೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಅಗತ್ಯವಿದೆ.
ನಗರದಲ್ಲಿ ಇರುವಂತಹ ಜಲಮಂಡಳಿಯ ಕೊಳವೆ ಬಾವಿಗಳ ಸಮೀಕ್ಷೆ ಮಾಡುವುದು ಅಗತ್ಯವಿದೆ. ಇದಕ್ಕಾಗಿ ಜಲಮಂಡಳಿಯ ಪರವಾನಗಿ ಹೊಂದಿರುವ ಬೆಂಗಳೂರು ಕೊಳವೆ ಬಾವಿ ಗುತ್ತಿಗೆದಾರ ಸಂಘದವರು ಅಧಿಕಾರಿಗಳೊಂದಿಗೆ ಜಂಟಿಯಾಗಿ ತಮ್ಮ ವ್ಯಾಪ್ತಿಯಲ್ಲಿ ಇರುವ ಕೊಳವೆ ಬಾವಿಗಳ ಮಾಹಿತಿ ಕ್ರೋಢೀಕರಿಸಿ ನೀಡುವಂತೆ ಅಧ್ಯಕ್ಷರು ನಿರ್ದೇಶಿಸಿದರು.
ತ್ವರಿತವಾಗಿ ಕೊಳವೆ ಬಾವಿಗಳ ದುರಸ್ತಿಗೆ ತಾಕೀತು
ನಗರದಲ್ಲಿ ರಿವೈಂಡಿಗ್ ಸೇರಿದಂತೆ ಸಣ್ಣ ಸಣ್ಣ ತಾಂತ್ರಿಕ ಸಮಸ್ಯೆಗಳಿಂದ ಕೆಲಸ ಸ್ಥಗಿತಗೊಳಿಸಿರುವ, ಸ್ಥಬ್ದವಾಗಿರುವ ಕೊಳವೆ ಬಾವಿಗಳನ್ನು ದುರಸ್ತಿ (ರಿಪೇರಿ) ಮಾಡಿ ಅದನ್ನು ಸುಸ್ಥಿತಿಗೆ ತರಲು ಒತ್ತು ಕೊಡಿ. ಇದಕ್ಕೆ ಇರುವ ಕೆಲವು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುವಂತೆ ಗುತ್ತಿಗೆದಾರರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಜಲಮಂಡಳಿ ಅಧ್ಯಕ್ಷರು ಸ್ಪಂದಿಸಿದರು.
ಬತ್ತಿದ ಕೊಳವೆ ಬಾವಿಗಳ ಮರುಪೂರಣಕ್ಕೆ ಸೂಚನೆ
ನಗರದಲ್ಲಿ ಬರುವ ಮಳೆಯನ್ನು ಸರಿಯಾದ ರೀತಿಯಲ್ಲಿ ಮರುಪೂರಣ ಆಗುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಉಪಯೋಗಿಸಬೇಕಿದೆ. ಬತ್ತಿ ಹೋಗಿರುವ ಹಾಗೂ ಅವುಗಳನ್ನು ಮತ್ತೆ ಸರಿಪಡಿಸಲು ಸಾಧ್ಯವಾಗದಿರುವ ಕೊಳವೆ ಬಾವಿಗಳನ್ನು ಮಳೆ ನೀರು ಇಂಗು ಗುಂಡಿ ಆಗಿ ಬಳಸಬೇಕು.
ಬತ್ತಿ ಕೊಳವೆ ಬಾವಿಗಳಿಗೆ ಅಕ್ಕಪಕ್ಕದ ಮನೆಗಳಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲು ಅಗತ್ಯ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸದ್ಯ ಬೆಂಗಳೂರಿನಲ್ಲಿ ನೀರು ಪೋಲಾಗುವುದಕ್ಕೆ ಜಲಮಂಡಳಿ ವಿವಿಧ ಕ್ರಮ ಕೈಗೊಳ್ಳಲಾಗಿದೆ. ನಲ್ಲಿಗಳಿಗೆ ಮಾಸ್ಕ್ ಟ್ಯಾಪ್ ಹಾಕಿ ಮಿತವ್ಯಯವಾಗಿ ನೀರು ಬಳಸುವಂತೆ ಜಲಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.
ಸಭೆಯಲ್ಲಿ ಜಲಮಂಡಳಿಯ ಮುಖ್ಯ ಅಭಿಯಂತರ ಸುರೇಶ್, ಅಧಿಕಾರಿ ಜಯಪ್ರಕಾಶ, ಬೆಂಗಳೂರು ಕೊಳವೆಬಾವಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯಣ್ಣ ಇನ್ನೀತರರು ಪಾಲ್ಗೊಂಡಿದ್ದರು.












Click it and Unblock the Notifications