Cauvery Water: ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಗುಡ್ ನ್ಯೂಸ್: BWSSB
ಬೆಂಗಳೂರು, ಫೆಬ್ರವರಿ 21: ರಾಜ್ಯಾದ್ಯಂತ ಬೇಸಿಗೆ ಆರ್ಭಟ ಶುರುವಾಗಿದೆ. ಕಾವೇರಿ ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣ ಕ್ರಮಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಾಗಿದೆ. ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ ಎನ್ನುವ ನಿವಾಸಿಗಳ ಆತಂಕ ದೂರ ಮಾಡಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಗುಡ್ ನ್ಯೂಸ್ ನೀಡಿದ್ದಾರೆ.
ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಕಾವೇರಿ ಸಂಪರ್ಕಕ್ಕೆ ಪಡೆಯುವ ನಿಟ್ಟಿನಲ್ಲಿ ಅವರಲ್ಲಿರುವ ಗೊಂದಲಗಳಿಗೆ ಪರಿಹಾರ ನೀಡಲು ನಡೆದ ಸರಣಿ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.

ಕಾವೇರಿ ಸಂಪರ್ಕ: ಮಾದರಿ ಕ್ಯಾಲ್ಯುಕ್ಯುಲೇಟರ್
ನಗರದ ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎನ್ನುವ ನಿವಾಸಿಗಳ ಆತಂಕಗಳನ್ನು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಗೊಂದಲವನ್ನು ಸ್ಥಳದಲ್ಲೇ ಪರಿಹರಿಸಲಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅದರ ಫಾಲೋಅಪ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇರುವ ಪ್ರಕ್ರಿಯೆ ಸರಳೀಕರಣಗೊಳಿಸುವುದು ಅಗತ್ಯವಿದೆ. ಅಲ್ಲದೇ, ಅಪಾರ್ಟ್‌ಮೆಂಟ್‌ಗಳು ಕಾವೇರಿ ಸಂಪರ್ಕ ಪಡೆಯುವ ಸಂಧರ್ಭದಲ್ಲಿ ವಿಧಿಸಲಾಗುತ್ತಿರುವ ಶುಲ್ಕದ ಬಗ್ಗೆ ಗೊಂದಲಗಳಿವೆ.
ಈ ಗೊಂದಲಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಲಮಂಡಳಿಯ ವೆಬ್‌ಸೈಟ್‌ನಲ್ಲಿ ಶುಲ್ಕವನ್ನು ಪರಿಶೀಲಿಸಲು ಮಾದರಿ ಕ್ಯಾಲ್ಯುಕ್ಯುಲೇಟರ್ ಅನ್ನು ಅಳವಡಿಸಲಾಗುವುದು. ಈ ಕ್ಯಾಲ್ಯೂಕ್ಯೂಲೇಟರ್ ಮೂಲಕ ಗ್ರಾಹಕರು ತಮ್ಮ ಅಪಾರ್ಟ್‌ಮೆಂಟ್‌ಗಳಿಗೆ ಅಥವಾ ಮನೆಗಳಿಗೆ ವಿಧಿಸಲಾಗುವ ಶುಲ್ಕದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಅಪಾರ್ಟ್‌ಮೆಂಟ್‌ಗಳು ಕಾವೇರಿ ಸಂಪರ್ಕ ಪಡೆದುಕೊಳ್ಳುವ ಪ್ರಕ್ರಿಯೆ ಸರಳಗೊಳಿಸಲಾಗುವುದು ಎಂದು ತಿಳಿಸಿದರು.
ಶುಲ್ಕ ಸಂಬಂಧಿ ದೂರು: ಸಮಿತಿ ರಚನೆ
ಶುಲ್ಕ ಸಂಬಂಧಿಸಿದಂತಹ ಯಾವುದೇ ಸಮಸ್ಯೆಗಳು ಹಾಗೂ ಗೊಂದಲಗಳು ಉಂಟಾದಲ್ಲಿ ಅದರ ಬಗ್ಗೆ ಗ್ರಾಹಕರು ದೂರು ನೀಡಲು ಹಾಗೂ ಅದಕ್ಕೆ ಪರಿಹಾರ ಪಡೆದುಕೊಳ್ಳಲು ಅನುವು ಮಾಡಿಡಲಾಗುವುದು. ಈ ನಿಟ್ಟಿನಲ್ಲಿ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಈ ಸಮಿತಿ ದೂರುಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಗ್ರಾಹಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಶುಲ್ಕ ಹಾಗೂ ಅನಗತ್ಯ ವಿಳಂಬಕ್ಕೆ ಈ ಸಮಿತಿಯ ಮೂಲಕ ಪಾರದರ್ಶಕವಾಗಿ ಪರಿಹಾರ ನೀಡಲಿದ್ದೇವೆ.

ಪ್ರತಿನಿತ್ಯ 200 ಲೀ. ನೀರು ಸರಬರಾಜು
ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪ್ರತಿನಿತ್ಯ ಪ್ರತಿ ಮನೆಗೂ ಪ್ರತಿನಿತ್ಯ 200 ಲೀಟರ್ ನೀರು ಸರಬರಾಜು ಮಾಡಲಾಗುವುದು. ಕಾವೇರಿ 5 ನೇ ಹಂತದ ಯೋಜನೆ ಲೋಕಾರ್ಪಣೆಯ ನಂತರ ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ನೀರು ಲಭ್ಯವಿದೆ.
ಹಂತ ಹಂತವಾಗಿ ಎಲ್ಲಾ ಪ್ರದೇಶಗಳಿಗೂ ಈ ನೀರನ್ನು ತಲುಪಿಸುವ ಕಾರ್ಯದಲ್ಲಿ ಬೆಂಗಳೂರು ಜಲಮಂಡಳಿ ತೊಡಗಿಕೊಂಡಿದೆ. ಅಗತ್ಯವಿರುವ ಪ್ರಮಾಣದ ನೀರನ್ನು ನೀಡು ಗುರಿ ಜಲಮಂಡಳಿ ಹೊಂದಿದೆ ಎಂದು ಹೇಳಿದರು.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್‌ನ ಉಪಾಧ್ಯಕ್ಷ ಸತೀಶ್ ಮಲ್ಯ ಮಾತನಾಡಿ, ಕಾವೇರಿ ನೀರಿನ ಸಂಪರ್ಕ ಪಡೆಯುವ ನಿಟ್ಟಿನಲ್ಲಿ ಅಪಾರ್ಟ್‌ಮೆಂಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರು ಜಲಮಂಡಳಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ನಮ್ಮ ಜೊತೆಗೂಡಿ ವಿಭಾಗವಾರು ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಜಲಮಂಡಳಿ ಅಧ್ಯಕ್ಷರೇ ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡುತ್ತಿದ್ದಾರೆ. ನಿವಾಸಿಗಳ ಅನುಕೂಲಕ್ಕಾಗಿ ಎಲ್ಲ ವಲಯಗಳಲ್ಲಿ ಸಭೆ ನಡೆಸಲಾಗುತ್ತಿದೆ.
258 ಕಾವೇರಿ ಸಂಪರ್ಕ ಅಭಿಯಾನ
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮುಂಬರುವ ಬೇಸಿಗೆಯ ಸಂಧರ್ಭದಲ್ಲಿ ಸಾರ್ವಜನಿಕರು ನೀರಿನ ಸಮಸ್ಯೆಯಿಂದ ಬಳಲಬಾರದು. 258 ಕಾವೇರಿ ಸಂಪರ್ಕ ಅಭಿಯಾನ ನಡೆಸಲಾಗಿದೆ. 21 ಸಾವಿರಕ್ಕೂ ಹೆಚ್ಚು ಸಂಪರ್ಕ ನೀಡಲಾಗಿದೆ. ಅಪಾರ್ಟ್‌ಮೆಂಟ್‌ಗಳ ನಿವಾಸಿಗಳ ಸಮಸ್ಯೆ ಪರಿಹಾರ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದರು.












Click it and Unblock the Notifications