BWSSB: ಒಳಚರಂಡಿಗೆ ತ್ಯಾಜ್ಯನೀರು ಹರಿಸುವ ಅನಧೀಕೃತ 2137 ಸಂಪರ್ಕ ಪತ್ತೆ
ಬೆಂಗಳೂರು, ಮೇ 11: ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹಾಗೂ ಮಳೆ ಕಾಲುವೆಗೆ ಹರಿಸುತ್ತಿರುವರ ಅನಧಿಕೃತ ಸಂಪರ್ಕ ಪತ್ತೆ ಕಾರ್ಯ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನೀರು ಸರಬರಾಕು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ಡಾ. ವಿ ರಾಮ್ ಪ್ರಸಾತ್ ಮನೋಹರ್ ಅವರು, ಒಳಚರಂಡಿಗೆ ತ್ಯಾಜ್ಯ ನೀರು ಹರಿಸುವ ಅನಧೀಕೃತ ಸಂಪರ್ಕ ಪತ್ತೆ ಕಾರ್ಯಕ್ಕೆ ಚುರುಕು ನೀಡಿದ್ದೇವೆ. ಒಟ್ಟು 2137 ಅನಧಿಕೃತ ಸಂಪರ್ಕಗಳು ಪತ್ತೆ ಮಾಡಲಾಗಿದೆ.

ಪತ್ತೆಯಾದ ಅನಧಿಕೃತ ಸಂಪರ್ಕಗಳ ವಿವರ
ಜಲಮಂಡಳಿ ಅಧಿಕಾರಿಗಳು ನಗರದಲ್ಲಿ ಒಟ್ಟು 17793 ಕಡೆಗಳಲ್ಲಿ ಸರ್ವೆ ನಡೆಡಿದ್ದರು. ಇದರಲ್ಲಿ ಒಟ್ಟು 2137 ಅನಧಿಕೃತ ಸಂಪರ್ಕಗಳು ಪತ್ತೆ ಆಗಿವೆ. ಅಕ್ರಮಗಳನ್ನು ಸಕ್ರಮಗೊಳಿಸಲು ಮುಂದಾಗದೇ ಇರುವವರ ಮೇಲೆ ದಂಡ ವಿಧಿಸುವ ನೋಟೀಸ್ ನೀಡಲಾಗುತ್ತಿದೆ. ಅನಧಿಕೃತ ಸಂಪರ್ಕಗಳನ್ನ ಸಕ್ರಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಅವರು ತಿಳಿಸಿದರು.
ಜಲಮಂಡಳಿಯಿಂದ ಅಧಿಕೃತವಾಗಿ ಸಂಪರ್ಕ ಪಡೆಯದೆ ಕೆಲವೆಡೆ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಹೀಗೆ ಅನಧಿಕೃತ ಸಂಪರ್ಕದಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗಿ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ತ್ಯಾಜ್ಯ ನೀರು ಹರಿಯುವ ಸಾಧ್ಯತೆ ಹೆಚ್ಚಾಗುತ್ತದೆ.
ಜನರ ಆರೋಗ್ಯದ ಮೇಲೆ ದುಷ್ಪರಿಣಾಮ
ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಇದನ್ನ ತಡೆಯುವ ದೃಷ್ಟಿಯಿಂದ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಲು ಏಪ್ರಿಲ್ 24 ರಿಂದ ಅವಕಾಶ ನೀಡಲಾಗಿತ್ತು. ಅಲ್ಲದೇ, ಅಧಿಕಾರಿಗಳು ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸುವಂತೆಯೂ ಸೂಚನೆ ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಯಬಿಡುತ್ತಿರುವುದರ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಇಂದಿನವರೆಗೂ ನಗರದಲ್ಲಿ 17,793 ಕಡೆಗಳಲ್ಲಿ ಸರ್ವೆಯನ್ನು ನಡೆಸಲಾಗಿದೆ. 587 ಅಪಾರ್ಟ್‌ಮೆಂಟಗಳನ್ನು ಒಳಗೊಂಡಂತೆ ಅನಧಿಕೃತವಾಗಿ ಸಂಪರ್ಕ ಪಡೆದಿರುವ 2,137 ಸಂಪರ್ಕಗಳನ್ನ ಪತ್ತೆಹಚ್ಚಲಾಗಿದೆ.

ಅನಧೀಕೃತ ಸಂಪರ್ಕಗಳ ವಿರುದ್ಧ ದಂಡಾಸ್ತ್ರ, ನೋಟಿಸ್
ಇವುಗಳಲ್ಲಿ 260 ಸಂಪರ್ಕಗಳು ಅಧಿಕೃತಗೊಳಿಸಲು ಅರ್ಜಿಯನ್ನು ಸಲ್ಲಿಸಿವೆ. 149 ಸಂಪರ್ಕಗಳಿಗೆ ಡಿಮ್ಯಾಂಡ್ ನೋಟೀಸ್ ಜಾರಿಗೊಳಿಸಲಾಗಿದ್ದು, 60 ಸಂಪರ್ಕಗಳಿಂದ ದಂಡವನ್ನು ವಸೂಲು ಮಾಡಲಾಗಿದೆ. ಇದರ ಜೊತೆಯಲ್ಲೇ 1,390 ಸಂಪರ್ಕಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಅನಧಿಕೃತವಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವುದರಿಂದ ಸಾರ್ವಜನಿಕರಲ್ಲಿ ಆರೋಗ್ಯದ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಗಳು ಹೆಚ್ಚು. ಮಳೆಗಾಲದಲ್ಲಿ ಅನಧಿಕೃತ ಸಂಪರ್ಕಗಳಿಂದ ಬರುವಂತಹ ತ್ಯಾಜ್ಯ ನೀರು ನಮ್ಮ ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚು ಮಾಡುತ್ತದೆ.
ಮುಂದಿನ ದಿನಗಳಲ್ಲಿ ಒಳಚರಂಡಿ ಮೇಲೆ ಒತ್ತಡ ಆಗದಂತೆ ತಡೆಯುವುದು ಜಲಮಂಡಳಿ ಗುರಿ ಆಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರದಿಂದ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.












Click it and Unblock the Notifications