ಬೆಂಗಳೂರಿಗೆ ಶುಕ್ರವಾರದ ಶುಭೋದಯ ಹೇಳಿದ ಮಳೆ
ಬೆಂಗಳೂರು, ನವೆಂಬರ್ 08 : ಶುಕ್ರವಾರ ಮುಂಜಾನೆ ಬೆಂಗಳೂರಿನ ನಿವಾಸಿಗಳಿಗೆ ಮಳೆ ಗುಡ್ ಮಾರ್ನಿಂಗ್ ಹೇಳಿದೆ. ನವೆಂಬರ್ 8ರಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರ ಮುಂಜಾನೆ 5 ಗಂಟೆಗೆ ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ಆರಂಭವಾಯಿತು. ಸುಮಾರು ಅರ್ಧಗಂಟೆಗಳ ಕಾಲ ಜೋರಾರಿ ಮಳೆ ಸುರಿದಿದ್ದು, ವಾಕಿಂಗ್ ಹೊರಟವರ ಉತ್ಸಾಹಕ್ಕೆ ತಣ್ಣೀರು ಚೆಲ್ಲಿತು.

ಜಯನಗರ, ಬಸವನಗುಡಿ, ಎನ್. ಆರ್. ಕಾಲೋನಿ, ಗಾಂಧಿ ಬಜಾರ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಕೊಂಡಿದ್ದು, ದ್ವಿ ಚಕ್ರ ವಾಹನ ಸವಾರರು ಪರದಾಡಿದರು. ಮೋಡ ಕವಿದ ವಾತಾವರಣ ಇದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ.
ಬುಲ್ ಬುಲ್ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದೆ. ದೇಶದ ಪೂರ್ವ ಕರಾವಳಿಗೆ ಸಹ ಚಂಡಮಾರುತದ ಭೀತಿ ಎದುರಾಗಿದ್ದು, ಓಡಿಶಾ ರಾಜ್ಯದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದಾಗಿ ಬುಲ್ ಬುಲ್ ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದಾಗಿ ಕರ್ನಾಟಕ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.











Click it and Unblock the Notifications