ರಾಜಕಾಲುವೆ ಮೇಲೆ ಸೇತುವೆ ನಿರ್ಮಾಣ ಒತ್ತುವರಿಯಲ್ಲ: ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 11: ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಿಲ್ಲದಂತೆ ಸೇತುವೆ ನಿರ್ಮಾಣ ಮಾಡುವುದು ಒತ್ತುವರಿ ಮಾಡಿದಂತಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಆನೇಕಲ್ ಯೋಜನಾ ಪ್ರಾಧಿಕಾರ ತಹಶೀಲ್ದಾರ್ ಅವರೊಂದಿಗೆ ನಡೆಸಿದ್ದ ಪತ್ರ ವ್ಯವಹಾರ ಹಾಗು ಒತ್ತುವರಿ ಆರೋಪ ಸಂಬಂಧ ಕಟ್ಟಡದ ಮುಂದೆ ಹಾಕಿದ್ದ ಫಲಕ ತೆರವುಗೊಳಿಸಲು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಮೆಸೆಸ್ ಜನಾರ್ಧನ ಇಂಡಿಯಾ ಪ್ರೇವೇಟ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.
ಹೈಕೋರ್ಟ್ ಆದೇಶವೇನು?; "ರಾಜಕಾಲುವೆಯ ಮೇಲೆ ಒಂದು ಬದಿಯಿಂದ ಮತ್ತೊಂದು ಬದಿಗೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿ ಮಾಡದಿದ್ದರೆ ಅದು ಒತ್ತುವರಿ ಆಗುವುದಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಒತ್ತುವರಿ ಎಂದರೆ ಯಾವುದೇ ಒಬ್ಬ ವ್ಯಕ್ತಿಯೊಬ್ಬರಿಗೆ ಸೇರದ ಆಸ್ತಿಯ ಮೇಲೆ ಒತ್ತಾಯಪೂರ್ವಕ ಹಾಗೂ ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಂಡಿರಬೇಕಾಗುತ್ತದೆ. ಜತೆಗೆ, ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದಾದರೆ ಒತ್ತುವರಿಯಾಗಿಲ್ಲ ಎಂಬುದಾಗಿ ಅರ್ಥವಾಗಲಿದೆ. ಆದರೆ, ಬಳಿಕ ಖಾಸಗಿ ವ್ಯಕ್ತಿ ನೀಡಿದ ದೂರಿನನ್ವಯ ಒತ್ತುವರಿ ಆರೋಪದಲ್ಲಿ ಮತ್ತೆ ತಹಶೀಲ್ದಾರರಿಗೆ ಪತ್ರ ಬರೆಯಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಪರ ವಕೀಲರು, ರಾಜಕಾಲುವೆ ಮೇಲೆ ಯಾವುದೇ ಸೇತುವೆ ನಿರ್ಮಾಣ ಮಾಡಿಲ್ಲ. ಆದರೆ, ವಸತಿ ಸಮುಚ್ಚಯದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನ ಹೋಗಿ ಬರಲು ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯಲು ಯಾವುದೇ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಅರ್ಜಿದಾರರ ಪರ ನ್ಯಾಯವಾದಿಗಳು, ಭೂ ಧಾಖಲೆಗಳ ಇಲಾಖೆ ಹೆಚ್ಚುವರಿ ನಿರ್ದೇಶಕರ ಮೂಲಕ ಸರ್ವೇ ಕಾರ್ಯ ನಡೆಸಲಾಗಿದೆ. ಅದರಂತೆ ಗ್ರಾಮದ ನಕ್ಷೆಯಲ್ಲಿ ಇರುವಂತೆ ರಾಜಕಾಲುವೆ ಮೇಲೆ ಯಾವುದೇ ಕಟ್ಟಡ ನಿರ್ಮಾಣ ಮಾಡಿಲ್ಲ ಎಂಬುದಾಗಿ ತಿಳಿಸಲಾಗಿದೆ.
ಜತೆಗೆ, ವಸತಿ ಸಮುಚ್ಚಯವು ರಾಜಕಾಲುವೆ ಎರಡೂ ಬದಿಗಳಲ್ಲಿದ್ದು, ಅಲ್ಲಿಯ ನಿವಾಸಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಬರುವುದಕ್ಕಾಗಿ ಮೂರು ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ನೀರು ಸರಾಗವಾಗಿ ಹರಿದುಹೋಗುವುದಕ್ಕಾಗಿ ಕಾಂಕ್ರೀಟ್ ಪೈಪ್ ಗಳನ್ನು ಅಳವಡಿಸಲಾಗಿದ್ದು, ನೀರು ಹರಿಯುವುದಕ್ಕೆ ಯಾವುದೇ ಅಡ್ಡಿಯುಂಟಾಗಿಲ್ಲ ಎಂದು ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಕಂಪನಿ, ಬೆಂಗಳೂರು ನಗರ ಜಿಲ್ಲಾ ಆನೇಕಲ್ ತಾಲೂಕು, ಅತ್ತಿಬೆಲೆ ಹೋಬಳಿಯ ಎಂ.ಮೇಡಹಳ್ಳಿ ಗ್ರಾಮದಲ್ಲಿ ಜನಾಧಾರ ಶುಭ್ ಹೆಸರಿಯಲ್ಲಿ 1,128 ವಸತಿ ಸಮಚ್ಚಯ ನೀಡುವುದಕ್ಕಾಗಿ 2013ರ ಜನವರಿಯಲ್ಲಿ ಅನುಮತಿ ಲಭ್ಯವಾಗಿತ್ತು. 2013ರ ಜೂನ್ 5 ರಂದು ಆನೇಕಲ್ ಯೋಜನಾ ಪ್ರಾಧಿಕಾರ ನೀಡಿದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿತ್ತು. ಅಲ್ಲದೆ, ಖರೀದಿದಾರರಿಗೆ ವಸತಿ ಸಮುಚ್ಚಯಗಳನ್ನು ಮಾರಾಟ ಮಾಡಲಾಗಿದ್ದು, ಎಲ್ಲ ರೀತಿಯ ಅನುಮತಿಗಳನ್ನು ಪಡೆದುಕೊಂಡಿದ್ದರು.
ಆದರೆ, ಪಿ. ಎಂ. ಕೃಷ್ಣಪ್ಪ ಎಂಬುವರು ನೀಡಿದ ದೂರಿನ ಅನ್ವಯ 2016ರ ಆಗಸ್ಟ್ 19ರಂದು ಆನೇಕಲ್ ಯೋಜನಾ ಪ್ರಾಧಿಕಾರ ತಹಶೀಲ್ದಾರ್ ಅವರಿಗೆ ಅರ್ಜಿದಾರರ ವಸತಿ ಸಮುಚ್ಚಯದಲ್ಲಿ ರಾಜಕಾಲುವೆ ಸೇತುವೆ ನಿರ್ಮಾಣ ಮಾಡುವ ಮೂಲಕ ಒತ್ತುವರಿ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿತ್ತು. ಪರಿಣಾಮ ತಹಶೀಲ್ದಾರ್ ಅವರು ವಸತಿ ಸಮುಚ್ಚಯದ ಮುಂದೆ ಒತ್ತುವರಿ ಮಾಡಲಾಗಿದೆ ಎಂಬುದಾಗಿ ಫಲಕ ಅಳವಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications