ಜುಲೈ 3ರಿಂದ ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಬೆಂಗಳೂರು, ಜುಲೈ 02: ಕರ್ನಾಟಕದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಸುತ್ತಮುತ್ತಲೂ ಜುಲೈ 3ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಯನ್ನು ಸಹ ನಡೆಸುವಂತಿಲ್ಲ ಎಂದು ಪೊಲೀಸರು ಆದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜುಲೈ 3 ರಿಂದ 14ರ ತನಕ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯ ತನಕ ವಿಧಾನಸೌಧ ಸುತ್ತಮುತ್ತಲಿನ 2 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

Budget Session Prohibitory Order Around Vidhana Soudha From June 3 To 14

ಜುಲೈ 3ರ ಸೋಮವಾರ ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜುಲೈ 7ರಂದು ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

ಪ್ರತಿಭಟನೆ, ಮೆರವಣಿಗೆ ನಿಷೇಧ; ಬೆಂಗಳೂರು ನಗರ ಪೊಲೀಸ್ ಆಯುಕ್ತರು ವಿಧಾನಸೌಧ ಸುತ್ತಮುತ್ತಲಿನ 2 ಕಿ. ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭದಲ್ಲಿ 5 ಅಥವ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು ಎಂದು ಹೇಳಿದ್ದಾರೆ.

ಪ್ರತಿಭಟನೆ, ಮೆರವಣಿಗೆ, ಜಾಥಾ, ಸಭೆ ನಡೆಸಬಾರದು ಎಂದು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಿದ್ದಾರೆ. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಚಾಕು ಮುಂತಾದ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಓಡಾಡಬಾರದು. ವ್ಯಕ್ತಿಗಳ ಪ್ರತಿಕೃತಿ ದಹನ, ಭಿತ್ತಿಪತ್ರ ಪ್ರದರ್ಶನ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಈಗಾಗಲೇ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತೇವೆ ಎಂದು ರಾಜ್ಯದ ವಿರೋಧ ಪಕ್ಷವಾದ ಬಿಜೆಪಿ ಘೋಷಣೆ ಮಾಡಿದೆ. ಅಲ್ಲದೇ ಜುಲೈ 3ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ದಿನ ಪೂರ್ತಿ ಧರಣಿ ನಡೆಸುವುದಾಗಿ ಹೇಳಿದೆ.

ಮೊದಲ ಅಧಿವೇಶನ; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಳಿಕ ಕಾಂಗ್ರೆಸ್ ಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.

ಜುಲೈ 3ರಂದು ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಜುಲೈ 5 ರಿಂದ 7ರ ತನಕ ಕಲಾಪ ನಡೆಯಲಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗಳು ನಡೆಯಲಿವೆ. ನಂತರ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ.

ಜುಲೈ 7ರಂದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಜುಲೈ 8, 9 (ಶನಿವಾರ, ಭಾನುವಾರ) ಕಲಾಪ ಇರುವುದಿಲ್ಲ. ಜುಲೈ 10 ರಿಂದ 14ರ ತನಕ ಬಜೆಟ್ ಮೇಲೆ ಚರ್ಚೆಗಳು ನಡೆಯಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಬಜೆಟ್ ಮಂಡನೆ ತಯಾರಿ ಆರಂಭಿಸಿದ್ದಾರೆ. ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆಗುವ ನಷ್ಟವನ್ನು ಭರಿಸಲು ಸಂಪನ್ಮೂಲ ಹೊಂದಿಸುವುದು ಅವರ ಮುಂದಿರುವ ಪ್ರಮುಖ ಸವಾಲು.

ಈ ಬಾರಿಯ ರಾಜ್ಯ ಬಜೆಟ್‌ನ ಗಾತ್ರ 3.35 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಿದ್ದರಾಮಯ್ಯ ಈಗಾಗಲೇ ಸುಳಿವು ನೀಡಿದ್ದಾರೆ. 2023-24ನೇ ಸಾಲಿನ ಬಜೆಟ್ 3.09 ಲಕ್ಷ ಕೋಟಿ ಇದೆ. ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆದ್ದರಿಂದ ಬಜೆಟ್ ಗಾತ್ರವು ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+