ಜಾಹೀರಾತು ಫಲಕಗಳ ವಿರುದ್ಧ ಬಿಬಿಎಂಪಿ ಸಮರ
ಬೆಂಗಳೂರು, ಜ.29 : ಬೆಂಗಳೂರು ನಗರದಲ್ಲಿರುವ ಜಾಹೀರಾತು ಫಲಕಗಳ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಮರ ಸಾರಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ವಿಧದ ಜಾಹೀರಾತು ಫಲಕಗಳ ಮೇಲೆ ನಿಷೇಧ ವಿಧಿಸಲು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಗರದಲ್ಲಿ 21,000 ಅನಧಿಕೃತ ಜಾಹೀರಾತು ಫಲಕಗಳಿವೆ.
ಬುಧವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ವಿಧದ ಜಾಹೀರಾತು ಫಲಕಗಳನ್ನು ನಿಷೇಧಿಸುವ ನಿರ್ಣಯವನ್ನು ಮಂಡಿಸಿದರು. ಸಭೆ ಸರ್ವಾನುಮತದಿಂದ ಇದಕ್ಕೆ ಒಪ್ಪಿಗೆ ಸೂಚಿಸಿತು. [ಬೆಂಗಳೂರಿನಲ್ಲಿ ಜಾಹೀರಾತು ಗರಂ]

ಬೆಂಗಳೂರು ನಗರದ ಸೌಂದರ್ಯ, ವಾಹನ ಚಾಲಕರ ಸುರಕ್ಷತೆ, ಆಡಳಿತಾತ್ಮಕ ಶಿಸ್ತು ಹಾಗೂ ಪರಿಸರಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಅನಧಿಕೃತ ಜಾಹೀರಾತು ಫಲಕವನ್ನು ತೆರವುಗೊಳಿಸುವ ಕಾರ್ಯವೂ ಆರಂಭವಾಗಿದೆ. [ಬ್ಯಾನರ್ ಹಾಕಲು ಬಂತು ಮಾರ್ಗಸೂಚಿ]
ವಾಣಿಜ್ಯ ವ್ಯವಹಾರಗಳಿಗೆ ಅವುಗಳ ಹೆಸರು, ವಿಳಾಸ ನಮೂದಿಸಲು ಪ್ರತಿ ಸಂಸ್ಥೆಗೆ ನಿಗದಿತ ಉದ್ದ ಹಾಗೂ ಅಗಲದ ಒಂದು ಫಲಕವನ್ನು ಹಾಕಿಕೊಳ್ಳಲು ಮಾತ್ರ ಉಚಿತವಾಗಿ ಅನುಮತಿ ನೀಡಲಾಗುತ್ತದೆ. ಉಳಿದಂತೆ ಸ್ವಂತ ಫಲಕದ ಹೆಸರಿನಲ್ಲಿ ಯಾವುದೇ ಜಾಹೀರಾತು ಫಲಕ ಅಳವಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ.
ಬಿಬಿಎಂಪಿ ನೀಡಿರುವ ಮಾಹಿತಿಯಂತೆ ನಗರದಲ್ಲಿ ಒಟ್ಟು 2,261 ಅಧಿಕೃತ ಜಾಹೀರಾತು ಫಲಕಗಳಿವೆ. 21,000 ಅನಧಿಕೃತ ಫಲಕಗಳಿವೆ. ಜಾಹೀರಾತಿನಿಂದ 300 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಬರುತ್ತಿರುವ ಆದಾರ ಕೇವಲ 20 ಕೋಟಿ.












Click it and Unblock the Notifications