ಅ.2ರಂದು ಗಾಂಧಿ ಕಂಚಿನ ಪ್ರತಿಮೆ ಅನಾವರಣ
ಬೆಂಗಳೂರು, ಸೆ.9 : ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ನಿರ್ಮಿಸಲಾಗುತ್ತಿರುವ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ಅ.2ರಂದು ಅನಾವರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿತ್ತು, ಅನಿವಾರ್ಯ ಕಾರಣದಿಂದಾಗಿ ಅವರು ಆಗಮಿಸುತ್ತಿಲ್ಲ ಎಂದು ಸಿಎಂ ತಿಳಿಸಿದರು.
ಸೋಮವಾರ ಕಂಚಿನ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಅ.2ರ ಗಾಂಧಿ ಜಯಂತಿಯಂದು ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತದೆ. ವಿಶ್ವದಲ್ಲೇ ಅತಿ ಎತ್ತರದ ಧ್ಯಾನಾಸಕ್ತ ಭಂಗಿಯ ರಾಷ್ಟ್ರಪಿತನ ಪ್ರತಿಮೆ ಇದಾಗಿದೆ ಎಂದು ತಿಳಿಸಿದರು.

ಪ್ರತಿಮೆ ಅನಾವರಣ ಮಾಡುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆಮಂತ್ರಣ ನೀಡಿದ್ದೆವು. ಆದರೆ, ಅಂದು ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಯಲ್ಲಿ ಭಾಗವಹಿಸುವುದರಿಂದಾಗಿ ಅವರು ಆಗಮಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. [ವಿಶ್ವದ ಬೃಹತ್ ಗಾಂಧಿ ಪ್ರತಿಮೆ ಬೆಂಗಳೂರಿನಲ್ಲಿ]
ಪ್ರತಿಮೆ ಕುರಿತು ಮಾತನಾಡಿದ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, 13 ಅಡಿ ಎತ್ತರದ ಪೀಠದ ಮೇಲೆ 14 ಅಡಿ ಎತ್ತರದ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಲಿದ್ದಾರೆ ಎಂದರು.
ದೆಹಲಿಯ ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆಯ ಪ್ರತಿಕೃತಿ ಇದಾಗಿದ್ದು, ಆ ಪ್ರತಿಮೆ ನಿರ್ಮಿಸಿದ ದೆಹಲಿ ಮೂಲದ ಸುತಾರ್ ಆರ್ಟ್ಸ್ ಕಂಪನಿ ಇಲ್ಲಿಯೂ ಪ್ರತಿಮೆ ನಿರ್ಮಾಣ ಮಾಡಿದೆ. ಈಗಾಗಲೇ ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳ ವಿಧಾನಮಂಡಲ ಆವರಣದಲ್ಲಿ ಧ್ಯಾನಾಸಕ್ತ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅದೇ ರೀತಿಯ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಬೇಕು ಎಂದು 2011 ರಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಶಂಕರಮೂರ್ತಿ ಅವರು ತಿಳಿಸಿದರು.












Click it and Unblock the Notifications