Brand Bengaluru: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಸಂಪನ್ಮೂಲ ಕೊರತೆ, ಬಂದ ಸಲಹೆಗಳೇನು
ಬೆಂಗಳೂರು, ಸೆಪ್ಟಂಬರ್ 15: ನಗರದಲ್ಲಿ ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ನಾವೆಲ್ಲರೂ ಸೇರಿ ಹೊಸ ಮಾದರಿಯ ಯೋಜನೆಗಳನ್ನು ರೂಪಿಸಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಿ ಸಶಕ್ತರನ್ನಾಗಿ ಮಾಡಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯ ಭಾಗವಾಗಿ ಶೈಕ್ಷಣಿಕ ಬೆಂಗಳೂರು ವಿಷಯ ಕುರಿತು ಟೌನ್ ಹಾಲ್ ನಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಾರೊಬ್ಬ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದು, ಖಾಯಂ ಶಿಕ್ಷಕರು ಶೇಕಡಾ. 20 ರಷ್ಟಿದ್ದರೆ ಉಳಿದ ಶೇಕಡಾ 80 ರಷ್ಟು ಶಿಕ್ಷಕರು ಹೊರಗುತ್ತಿಗೆ ಆಧಾರದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ಶಿಕ್ಷಕರಿಗೆ ಉತ್ತಮ ತರಬೇತಿಯನ್ನು ನೀಡಿ ಅವರನ್ನೇ ಸದೃಢವಾಗಿಸಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಕೆಲಸ ಮಾಡಬೇಕು ಎಂದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಸಿದ್ಧತೆ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ಸಿದ್ದತೆಗಳನ್ನು ನಾವು ಮಾಡಿಕೊಳ್ಳಬೇಕಿದೆ. ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ನೀಡುವ ಮಾದರಿಯನ್ನು ನಾವು ಕಾಲ ಕಾಲಕ್ಕೆ ಬದಲಾಯಿಸಿಕೊಳ್ಳಬೇಕು. ಮಕ್ಕಳಲ್ಲಿ ವಿಧ್ಯಾಭ್ಯಾಸದ ಜೊತೆ ಬೇರೆ ಬೇರೆ ಚಟುವಟಿಕೆಗಳ ಬಗ್ಗೆಯೂ ಅರಿವು ಮೂಡಿಸುವ ಕಲಸ ಮಾಡಬೇಕು.
ಶೈಕ್ಷಣಿಕ ಬೆಂಗಳೂರು ವಿಚಾರವಾಗಿ ಇಂದಿನ ವಿಚಾರ ಸಂಕಿರಣದಲ್ಲಿ ಬರುವ ಸಲಹೆಗಳನ್ನು ಪರಿಗಣಿಸಿ ವರದಿಯನ್ನು ತಯಾರಿಸಲಾಗುವುದು. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬರುವ ಎಲ್ಲಾ 8 ವಿಷಯಗಳಿಗೆ ಸಂಬಂಧಿಸಿದಂತೆ ಬಂದಂತಹ ಸಲಹೆ/ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಒಂದು ದಿನ ಸಮಾವೇಶ ನಡೆಸಲಾಗುವುದು. ಬಳಿಕ ಅಂತಿಮ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರವು ಅಷ್ಟು ವಿಷಯಗಳ ಆಧಾರದ ಮೇಲೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದೆ ಎಂದು ಅವರು ವಿವರಿಸಿದರು.

ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 8 ವಿವಿಧ ವಿಷಯಗಳ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಅದನ್ನು ಒಟ್ಟುಗೂಡಿಸಿ ಸೂಕ್ತವಾಗಿ ವರದಿಯನ್ನು ಸಿದ್ದಪಡಿಸಲಾಗುತ್ತಿದೆ. ಶೈಕ್ಷಣಿಕ ಬೆಂಗಳೂರು ವಿಚಾರವಾಗಿ ನಗರದಲ್ಲಿ ಉನ್ನತ ಮಟ್ಟದ ಶಿಕ್ಷಣ ನೀಡುವ ಯೋಜನೆಗಳನ್ನು ಜಾರಿ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬಂದ ಸಲಹೆಗಳು
* ಮಕ್ಕಳಲ್ಲಿ ಸಂವಹನ ಕೌಶಲ್ಯಯದ ಬಗ್ಗೆ ಹೆಚ್ಚು ತಿಳುವಳಿಕೆ ನೀಡಬೇಕು.
* ಬಡ ವರ್ಗದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು.
* ಅಧ್ಯಯನದ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡಬೇಕು.
* ಬೆಂಗಳೂರು ಎಜುಕೇಷನ್ ಹಬ್ ಆಗಿದ್ದು, ಡಿಜಿಟಲ್/ಆರ್ಟಿಫಿಶಿಯಲ್ ಇಂಟಲಿಜೆಂಟ್ ಆಗಿ ಬದಲಾವಣೆಗೆ ಆದ್ಯತೆ ನೀಡುವುದು.
* ಬೆಂಗಳೂರಲ್ಲಿ ಉತ್ತಮ ರೀತಿಯ ಶಿಕ್ಷಣ ನೀತಿಯನ್ನು ಕಾಲಕಾಲಕ್ಕೆ ಉನ್ನತೀಕರಿಸಬೇಕು.
* ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು.
* ಮಾತೃ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಮಕ್ಕಳಿಗೆ ಆ ಬಗ್ಗೆ ತಿಳಿಸುವ ಕೆಲಸ ಮಾಡಬೇಕು.
* ಕ್ಲಸ್ಟರ್ ವ್ಯವಸ್ಥೆಯ ಶಿಕ್ಷಣಕ್ಕೆ ಒತ್ತು ನೀಡುವುದು.
* ಡಿಜಿಟಲ್ ಗ್ರಂಥಾಲಯಗಳನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ತೆರೆಯುವುದು.
* ಸ್ಕಿಲ್ ಸೆಂಟರ್ ಗಳನ್ನು ತೆರೆಯುವುದು.
* ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ನೀಡಬೇಕು.
* ಸಿಎಸ್‌ಆರ್ ಅನುದಾನವನ್ನು ಬಳಿಸಿಕೊಂಡು ಉತ್ತಮ ಶಿಕ್ಷಣ ನೀಡುವುದು.
* ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕೌನ್ಸೆಲಿಂಗ್ ನೀಡುವುದು.
* ವರ್ಚ್ಯುವಲ್ ಶಿಕ್ಷಣಕ್ಕೆ ಆದ್ಯತೆ ನೀಡಿ ಆ ಬಗ್ಗೆ ಶಿಕ್ಷಣ ವೃಂದಕ್ಕೆ ತರಬೇತಿ ನೀಡುವುದು.
ಸಮಾರಂಭದಲ್ಲಿ ಶಿಕ್ಷಣ ವಿಭಾಗದ ಉಪ ಆಯುಕ್ತರಾದ ವೆಂಕಟರಾಜು, ಶಿಕ್ಷಣ ತಜ್ಞರಾದ ಡಾ. ವೇಣುಗೋಪಾಲ್, ಡಾ. ಗೀತಾ ರಾಮಾನುಜಂ, ಪ್ರೊ. ಕೆ.ಇ ರಾಧಾಕೃಷ್ಣ, ರಾಮಕೃಷ್ಣ ರೆಡ್ಡಿ, ವಿವಿಧ ಕಾಲೇಜುಗಳು ಉಪನ್ಯಾಸಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications