ಬಾಂಬ್ ಬೆದರಿಗೆ ಕರೆ : ಕೊಚ್ಚಿ ವಿಮಾನ ಭೂ ಸ್ಪರ್ಶ
ಬೆಂಗಳೂರು, ಜು. 1 : ಬಾಂಬ್ ಬೆದರಿಕೆ ಕರೆ ಹಿನ್ನಲೆಯಲ್ಲಿ ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ತುರ್ತು ಭೂ ಸ್ಪರ್ಶ ಮಾಡಿದೆ. ತಪಾಸಣೆ ನಂತರ ಇದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾದ ಎಐ047 ವಿಮಾನ ಸೋಮವಾರ ರಾತ್ರಿ 9 ಗಂಟೆಗೆ ಕೊಚ್ಚಿಯಿಂದ ಹೊರಟಿತ್ತು. ರಾತ್ರಿ 11.30ಕ್ಕೆ ಅದು ನವದೆಹಲಿ ತಲುಪಬೇಕಾಗಿತ್ತು. ಆದರೆ, ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸಲಾಯಿತು.

ಅಪರಿಚಿತ ವ್ಯಕ್ತಿಯೊಬ್ಬರು ವಿಮಾನದಲ್ಲಿ ಬಾಂಬ್ ಇಡಲಾಗಿದ್ದು, ಅದು ದೆಹಲಿ ತಲಪುವ ವೇಳೆಗೆ ಸ್ಫೋಟಗೊಳ್ಳಲಿದೆ ಎಂದು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದರು. ಇದರಿಂದಾಗಿ 162 ಪ್ರಯಾಣಿಕರಿದ್ದ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. [ದೇವನಹಳ್ಳಿ ಬಳಿ 13 ಬಡಾವಣೆಗಳು ಅಕ್ರಮ, ಹುಷಾರು]
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ. ನಂತರ ಪ್ರಯಾಣಿಕರಿಗೆ ಬೇರೊಂದು ವಿಮಾನದ ವ್ಯವಸ್ಥೆ ಮಾಡಿಕೊಟ್ಟು ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
450 ಆಟೋ ಜಪ್ತಿ : ಆಟೋ ಚಾಲಕರ ವಿರುದ್ಧ ಪ್ರಯಾಣಿಕರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು 3,360 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 450 ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ವಿಭಾಗ (ಪಶ್ಚಿಮ) ಡಿಸಿಪಿ ಎಸ್.ಗಿರೀಶ್ ಹೇಳಿದ್ದಾರೆ.












Click it and Unblock the Notifications