Breaking: ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್
ಬೆಂಗಳೂರು ಜುಲೈ 18: ಬೆಂಗಳೂರಿನ ಆರ್‌ಆರ್ ನಗರದಲ್ಲಿರುವ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಶಾಲೆಯಲ್ಲಿ ಬಾಂಬ್ ಇದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಆರ್‌ಆರ್ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಒಡೆತನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಭಾನುವಾರ ಸಂಜೆ ಕಿಡಿಗೇಡಿಗಳು ಇ-ಮೇಲ್ ಕಳಿಸಿದ್ದು, ಸೋಮವಾರ ಈ-ಮೇಲ್ ಪರಿಶೀಲನೆ ವೇಳೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ.
ಬೆದರಿಕೆ ಸಂದೇಶ ಪತ್ತೆಯಾಗುತ್ತಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಘಟನೆ ಕುರಿತು ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರು ಆಗಿರುವ ಡಿ.ಕೆ.ಶಿವಕುಮಾರ್, " ಹುಚ್ಚ ವೆಂಕಟ್ ಎಂಬ ಹೆಸರಲ್ಲಿ ಬೆದರಿಕೆ ಪತ್ರ ಬಂದಿದೆ. ಭಾನುವಾರ ಇ-ಮೇಲ್ ಮೂಲಕ ಪತ್ರ ಬಂದಿದೆ. ಸೋಮವಾರ ತಿಳಿಯಿತು' ಎಂದರು.
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಕೂಡ ವಿದ್ಯಾರ್ಥಿಗಳ ಪೋಷಕರಿಗೆ ಆತಂಕ ಪಡುವ ಅಗತ್ಯವಿಲ್ಲ. ಪರಿಶೀಲನೆ ನಡೆಯುತ್ತಿದೆ. ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುತ್ತೇವೆ ಎಂದು ಧೈರ್ಯ ಹೇಳಿದ್ದರು.
ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, 'ಆರ್ ಆರ್ ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಕುರಿತು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಯಾವುದೇ ಆತಂಕ ಪಡುವುದು ಅಗತ್ಯವಿಲ್ಲ' ಎಂದಿದ್ದರು.
ಶಾಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸ್ಪೋಟಕ ಪತ್ತೆಯಾಗಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹೇಳಿಕೆ ನೀಡಿದ್ದಾರೆ.













Click it and Unblock the Notifications