ಬಾಂಬ್ ಸ್ಫೋಟ : ಲಿಷಾಳಿಗೆ ಪರಿಹಾರ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು, ಜೂ, 26 :ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಘಟಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಎಲ್ ಎಸ್ ಲಿಷಾಳಿಗೆ ರಾಜ್ಯ ಸರ್ಕಾರ 8.24 ಲಕ್ಷ ರೂ ಪರಿಹಾರ ನೀಡಿದೆ.
ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ ಎಸ್ ಪೊನ್ನಣ್ಣ ಪರಿಹಾರ ಕುರಿತಾಗಿ ಲಿಷಾ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಂತೆ ರಾಜ್ಯ ಸರ್ಕಾರ 6.24 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾಗೂ ಉಳಿದ 2 ಲಕ್ಷವನ್ನು ಭಯೋತ್ಪಾದಕ ಮತ್ತು ನಕ್ಸಲ್ ಪರಿಹಾರ ನಿಧಿಯಿಂದ ನೀಡಲು ತೀರ್ಮಾನಿಸಿದೆ. [ಹೈಕೋರ್ಟ್ ಮೊರೆ ಹೋದ ಮಲ್ಲೇಶ್ವರಂ ಸ್ಫೋಟದ ಗಾಯಾಳು]

ಅಲ್ಲದೇ ಭಯೋತ್ಪಾದಕ ಹಾಗೂ ಇನ್ನಿತರೆ ದೊಡ್ಡ ಮಟ್ಟದ ದಾಳಿಗಳಿಗೆ 3 ಲಕ್ಷ ಪರಿಹಾರ ಒದಗಿಸಬೇಕೆಂದು ನಿಯೋಜಿತ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಾವಾದಿ ಎ. ಎಸ್ ಬೋಪಣ್ಣ ಮನವಿಯನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಲಿಷಾ ಶಸ್ತ್ರ ಚಿಕಿತ್ಸೆಗೆ ಹಾಗೂ ಸಂಪೂರ್ಣ ಗುಣಮುಖಳಾಗಲು 10 ಲಕ್ಷ ತಗಲುತ್ತದೆ. ಹಾಗಾಗಿ ವೈದ್ಯಕೀಯ ವೆಚ್ಚ ಭರಿಸಲು 1 ಕೋಟಿ ಪರಿಹಾರ ನೀಡಬೇಕೆಂದು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರಾಜ್ಯ ಸರ್ಕಾರ ಪರಿಹಾರ ನಿಧಿಯಾಗಿ ಕೇವಲ 8.24 ಲಕ್ಷ ಘೋಷಿಸಿದೆ. ದಾಳಿಗೆ ತುತ್ತಾದವರಿಗೆ ನೀಡುವ ಪರಿಹಾರ ಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ಇದರ ಸಲುವಾಗಿ ವಿಶೇಷ ಸಮಿತಿ ನೇಮಿಸುವ ಅಗತ್ಯವಿದೆ ಎಂದು ಲಿಷಾ ಹೇಳಿದ್ದಾಳೆ.












Click it and Unblock the Notifications