BMTC: ಬಿಎಂಟಿಸಿಯ ಕೋಲಾರ ದರ್ಶನ ಟೂರ್ ಪ್ಯಾಕೇಜ್, ವಿವರಗಳು
ಬೆಂಗಳೂರು, ಮಾರ್ಚ್ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಕ್ಕೆ ಟೂರ್ ಪ್ಯಾಕೇಜ್ ನಡೆಸುತ್ತದೆ. ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್, ವಂಡರ್ ಲಾ ಮುಂತಾದ ಪ್ರದೇಶಕ್ಕೆ ಈಗಾಗಲೇ ಪ್ರವಾಸಿ ಪ್ಯಾಕೇಜ್ ಅಡಿ ಬಸ್‌ಗಳನ್ನು ಓಡಿಸುತ್ತದೆ. ಈ ಟೂರ್ ಪ್ಯಾಕೇಜ್‌ಗಳಿಗೆ ಸಿಕ್ಕಿದ ಉತ್ತಮ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಬೆಂಗಳೂರು-ಕೋಲಾರ ಟೂರ್ ಪ್ಯಾಕೇಜ್ ಘೋಷಣೆ ಮಾಡಲು ಬಿಎಂಟಿಸಿ ತಯಾರಿ ನಡೆಸಿದೆ.
ಬಿಎಂಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಲವೇ ದಿನಗಳಲ್ಲಿ ಬಿಎಂಟಿಸಿಯ 'ಕೋಲಾರ ಟೂರ್' ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ಬೆಂಗಳೂರು ನಗರದ ಜನರು ಎಸಿ ಬಸ್‌ಗಳಲ್ಲಿ ಕೋಲಾರದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ವಾಪಸ್ ಆಗಬಹುದು. ಇದು ಒಂದು ದಿನದ ಪ್ರವಾಸಿ ಪ್ಯಾಕೇಜ್ ಆಗಿರಲಿದೆ.

ಬೆಂಗಳೂರು ನಗರದ ಜನರಿಗೆ ಕೋಲಾರದ ಯಾತ್ರಾ ಸ್ಥಳಗಳನ್ನು ಪರಿಚಯ ಮಾಡಿಸಲು ಸಿದ್ಧತೆ ನಡೆದಿದೆ. ಬಿಎಂಟಿಸಿ ಘಟಕ-18ರ ಮೂಲಕ ಕೋಲಾರ ಟೂರ್ ಪ್ಯಾಕೇಜ್ ಆರಂಭವಾಗಲಿದೆ. ಈಗಾಗಲೇ ಕೋಲಾರದ ಪ್ರವಾಸಿ ತಾಣಗಳಿಗೆ ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ, ಟೂರ್ ಪ್ಯಾಕೇಜ್ ಆರಂಭಿಸುವ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ.
ಶೀಘ್ರವೇ ಕೋಲಾರ ಟೂರ್ ಪ್ಯಾಕೇಜ್ ಘೋಷಣೆ: ಚಿಕ್ಕತಿರುಪತಿ, ಕೋಟಿ ಲಿಂಗೇಶ್ವರ, ಬಂಗಾರು ಗಣಪತಿ, ಕುರುಡುಮಲೆ, ಆವಣಿ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿರುವ ವಿವಿಧ ಧಾರ್ಮಿಕ ಸ್ಥಳಗಳಿಗೆ ಬಿಎಂಟಿಸಿ ಘಟಕ-18ರ ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ನೇತೃತ್ವದ ನಿಯೋಗ ಭೇಟಿ ನೀಡಿದೆ.
ಕೋಲಾರ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳಿಗೆ ಒಂದು ದಿನದ ಟೂರ್ ಪ್ಯಾಕೇಜ್ ರೂಪಿಸಲು ಬಿಎಂಟಿಸಿ ಮುಂದಾಗಿದೆ. ಈ ಕುರಿತು ದೇವಾಲಯಗಳ ಪ್ರಧಾನ ಅರ್ಚಕರು, ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಒಂದು ದಿನದ ಪ್ರವಾಸಿ ಟೂರ್ ಪ್ಯಾಕೇಜ್‌ಗೆ ಇನ್ನೂ ಸಹ ದರ, ವೇಳಾಪಟ್ಟಿಯನ್ನು ನಿಗದಿ ಮಾಡಿಲ್ಲ. ವೋಲ್ವೋ ಬಸ್ ಮೂಲಕ ಈ ಪ್ರವಾಸಿ ಪ್ಯಾಕೇಜ್ ಆರಂಭಿಸಲಾಗುತ್ತದೆ. ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡು ಶೀಘ್ರವೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲಾರದ ಪ್ರಮುಖ ಪ್ರವಾಸಿ ತಾಣಗಳು
* ಕೋಲಾರಮ್ಮ ದೇವಾಲಯ: ಗಂಗರ ರಾಜಧಾನಿಯಾಗಿದ್ದ ಕೋಲಾರ ನಗರದಲ್ಲಿ ಕಲೆ, ಸಂಸ್ಕೃತಿಗಳ ಸಾಕಾರರೂಪ ತಳೆದ ಸ್ಮಾರಕಗಳಿದ್ದು, ನಗರದ ಪೂರ್ವಕ್ಕೆ ಇರುವ ಕೋಲಾರಮ್ಮ ದೇವಾಲಯ ಶಿಲ್ಪ ಕಲೆಯು ಉತ್ತಮ ಉದಾಹರಣೆ. ಲಂಬಕೋನಾಕೃತಿಯ ವಾಸ್ತು ಶಿಲ್ಪವನ್ನು ಹೊಂದಿರುವ ಜೋಡಿ ಮಂದಿರಗಳಿಂದ ಕೂಡಿದ ಸಾವಿರ ವರ್ಷಗಳ ಹಿಂದಿನ ಈ ಅಲಯಕ್ಕೆ ಒಂದೇ ಮುಖಮಂಟಪವಿರುವುದು ವೈಶಿಷ್ಟ್ಯ. ಉತ್ತರ ದೇವಮಂದಿರದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಶಕ್ತಿ ಸ್ವರೂಪಿಣಿ ಚಾಮುಂಡೇಶ್ವರಿ, ನಗರಾಧೀದೇವತೆ ಕೋಲಾರಮ್ಮ ಆಗಿದ್ದಾಳೆ.
* ಅಂತರ ಗಂಗೆ: ಕೋಲಾರ ನಗರದ ಪಶ್ಚಿಮಕ್ಕೆ 3 ಕಿ. ಮೀ. ದೂರದಲ್ಲಿ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಅಂತರಗಂಗೆ ಚೆಲುವಿನ ತಾಣವಾಗಿದೆ. ಇಲ್ಲಿರುವ ಬಸವಣ್ಣನ ಬಾಯಿಯಿಂದ ಸದಾ ಹೊರ ಹೊಮ್ಮುವ ಜಲಧಾರೆ ವಿಜ್ಞಾನ ವಿಸ್ಮಯವಾಗಿದೆ. ಶೃಂಗದ ಬೆಟ್ಟ ಗುಡ್ಡ, ಬಂಡೆಗಳು ಹಲವು ಆಕಾರಗಳನ್ನು ಪಡೆದಿದ್ದು, ಶಿಖರದಲ್ಲಿರುವ ಹಾವಿನಹೆಡೆ ಆಕಾರದ ಬಂಡೆಯಿಂದ ಏಳು ಹಳ್ಳಿಗಳ ಪಕ್ಷಿನೋಟ ಕಾಣಬಹುದಾಗಿದೆ. ಚಾರಣಪ್ರಿಯರ ಸ್ವರ್ಗವಾಗಿರುವ ಅಂತರಗಂಗೆ ಪ್ರದೇಶ ಹಲವು ಐತಿಹಾಸಿಕ ಗುಹೆಗಳನ್ನು ಬಳಗೊಂಡಿದೆ.
* ಸೋಮೇಶ್ವರ ದೇವಸ್ಥಾನ: ಕೋಲಾರಮ್ಮ ದೇವಾಲಯ ಸಮೀಪ ದ್ರಾವಿಡ ಶೈಲಿಗೆ ಉತ್ತಮ ಮಾದರಿಯಾದ ಶಿಲ್ಪಕಲೆ ವೈವಿಧ್ಯ ತೋರಿದ ಸುಂದರ ಸೋಮೇಶ್ವರ ದೇವಾಲಯವಿದೆ. ಪ್ರತ್ಯೇಕ ಕಲ್ಯಾಣ ಮಂಟಪ, ಗರ್ಭಗೃಹ, ಅಂತರಾಳ, ನವರಂಗಗಳು ಕಲೆಗಾರಿಕೆಯ ಹೊರ ಮೈ ಹೊಂದಿದೆ. ಒಳಗಿನ ಕಂಬಗಳ ಮೇಲಿನ ಕೆತ್ತನೆ ನೋಡಿದಾಗ ಇದೊಂದು ಉತ್ತುಂಗವಾದ ರಾಜತಾಂತ್ರಿ ವಿಗ್ರಹವಿದೆ.
* ಕುರುಡುಮಲೆ: ಕೌಂಡಿನ್ಯಗಿರಿ ಎಂದು ಪುರಾಣ ಪ್ರಸಿದ್ದವಾದ, ಹೊಯ್ಸಳರ ಸ್ಥಳೀಯ ರಾಜಧಾನಿಯಾಗಿದ್ದ ಕೂಡುಮಲೆ ಅಥವಾ ಕುರುಡುಮಲೆ ಮುಳಬಾಗಿಲು ನಗರಕ್ಕೆ 12 ಕಿ. ಮೀ. ದೂರವಿದ್ದು, ತ್ರಿಮೂರ್ತಿಗಳಿಂದ ಪೂಜಿಸಲ್ಪಡುವ 13 ಅಡಿ ಎತ್ತರದ ಭವ್ಯ ವಿನಾಯಕ ಮೂರ್ತಿಯಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ವಿಜಯನಗರದ ಕಾಲದ ಆಲಯದ ಕಂಬಗಳು ಸುಂದರ ಕೆತ್ತನೆಗಳನ್ನು ಒಳಗೊಂಡಿವೆ.
* ಬಂಗಾರು ತಿರುಪತಿ: ಮುಳಬಾಗಿಲು-ಬೇತಮಂಗಲ ರಸ್ತೆಯಲ್ಲಿನ ಗುಟ್ಟಹಳ್ಳಿಯಲ್ಲಿ ತಿರುಪತಿ ವೆಂಕಟೇಶ್ವರಸ್ವಾಮಿ ಆಲಯ ಹೋಲುವ ದೇವಾಲಯವಿದ್ದು, ಬಂಗಾರುತಿರುಪತಿ ಎಂದು ಖ್ಯಾತವಾಗಿದೆ. ಪುಟ್ಟದಾದ ವೆಂಕಟರಮಣ ಮೂರ್ತಿಯನ್ನು ಕಿಂಡಿಯ ಮೂಲಕ ದರ್ಶಿಸಬಹುದಾಗಿದ್ದು, ಬೆಟ್ಟ ಹತ್ತುವಾಗ ಗರುಡ, ಅಂಜನೇಯ, ವಿನಾಯಕ, ವರಾಹಸ್ವಾಮಿಯನ್ನು ಕಾಣಬಹುದು.












Click it and Unblock the Notifications