BMTC: ನಮ್ಗೆ ಗನ್ ಬೇಕು ಸಾರ್: ಬಿಎಂಟಿಸಿ ಚಾಲಕ & ನಿರ್ವಾಹಕರು ಈ ಬೇಡಿಕೆ ಇಟ್ಟಿದ್ದೇಕೆ?
ಬೆಂಗಳೂರು, ಅಕ್ಟೋಬರ್, 04: ಬಿಎಂಟಿಸಿ ಬಸ್ ನಿರ್ವಾಹಕನೋರ್ವನಿಗೆ ಇತ್ತೀಚೆಗಷ್ಟೇ ಪ್ರಯಾಣಿಕನೋರ್ವ ಚಾಕು ಚುಚ್ಚಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಆತಂಕಕ್ಕೆ ಒಳಗಾಗಿರುವ ಚಾಲಕರು ಹಾಗೂ ನಿರ್ವಾಕರು ತಮ್ಮ ರಕ್ಷಣೆಗಾಗಿ ಬಿಎಂಟಿಸಿ ಸಾರಿಗೆಯ ಎಂಡಿ ಬಳಿ ಇಟ್ಟ ಬೇಡಿಕೆ ಏನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಇತ್ತೀಚೆಗಷ್ಟೇ ಬಿಎಂಟಿಸಿ ನೆರೆ ರಾಜ್ಯದ ಪ್ರಯಾಣಿಕನೋರ್ವ ಕಂಡಕ್ಟರ್ಗೆ ಚಾಕು ಇರಿದಿದ್ದು, ಈ ಹಿನ್ನೆಲೆ ಇದೀಗ ಆತಂಕಕ್ಕೆ ಒಳಗಾಗಿರುವ ಚಾಲಕ ಮತ್ತು ನಿರ್ವಾಹಕರು ಗನ್ ಪರವಾನಗಿ ಪಡೆಯಲು ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಮನವಿ ಪತ್ರ ಬರೆದಿದ್ದಾರೆ.

ಅಕ್ಟೋಬರ್ 1ರಂದು ಮಂಗಳವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಎಂಬುವವರಿಗೆ ಪ್ರಯಾಣಿಕನೋರ್ವ ಚಾಕು ಇರಿದ ಘಟನೆ ನಡೆದಿತ್ತು. ಆದ್ದರಿಂದ ಇದೀಗ ಬಿಎಂಟಿಸಿಯ ಚಾಲಕರು, ನಿರ್ವಾಕನರು ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದು, ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ವೈಟ್‌ಫೀಲ್ಡ್ ಬಳಿಯ ಐಟಿಪಿಎಲ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಕಂಡಕ್ಟರ್ ಯೋಗೇಶ್ ಅವರಿಗೆ ಜಾರ್ಖಂಡ್ ಮೂಲದ ಹರ್ಷ ಸಿನ್ಹಾ ಚಾಕು ಇರಿದಿದ್ದು, ಇದೀಗ ನಿರ್ವಾಹಕ ಯೋಗೇಶ್ ವೈದೇಹಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪತ್ರದಲ್ಲಿ ಏನಿದೆ?: ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ, ಕಲುಷಿತ ವಾಯು ಮಾಲಿನ್ಯದಿಂದ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಬೇಸತ್ತು ಹೋಗಿರುತ್ತಾರೆ. ಅದರಲ್ಲೂ ಕೆಲವು ಪ್ರಯಾಣಿಕರ ಬಳಿ ಚಿಲ್ಲರೆ ವಿಷಯವಾಗಿ ಗಲಾಟೆ ಮಾಡಿಕೊಂಡಿರುವ ಉದಾಹರಣೆಗಳು ಇವೆ.
ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯ ಆಗಿರುವುದಿಲ್ಲ. ಆದರೆ, ಸಂಚಾರ ದಟ್ಟಣೆಯಲ್ಲಿ ವಾಹನ ಸವಾರರ ಹಾಗೂ ಬಸ್‌ನ ಪ್ರಯಾಣಿಕರ ಜೊತೆಯಲ್ಲಿ ಸಣ್ಣ-ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಾಮಾನ್ಯ ಆಗಿಬಿಟ್ಟಿದೆ. ಅದರಲ್ಲೂ ಸಂಸ್ಥೆಯ ಕನ್ನಡಿಗ ನೌಕರರ ಮೇಲೆ ಹೆಚ್ಚಾಗಿ ಬೇರೆ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ.
ಆದ್ದರಿಂದ ಇವರ ಜೀವ ರಕ್ಷಣೆಗಾಗಿ ಗನ್ ಪರವಾನಗಿ ಪಡೆಯಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದು ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಯೋಗೇಶ್ ಗೌಡ ಅವರು ಪತ್ರ ಬರೆದಿದ್ದಾರೆ.











Click it and Unblock the Notifications