ಬಿಎಂಟಿಸಿಯ ಶೇ. 50ರಷ್ಟು ಚಾಲಕರಿಗೆ 'ಹೃದಯ' ಸಂಬಂಧಿ ಕಾಯಿಲೆ ದೃಢ
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನ ಲಕ್ಷಾಂತರ ಜನರನ್ನು ಒಂದೆಡೆಯಿಂದ ಮತ್ತೊಂದು ಕಡೆ ಸುರಕ್ಷಿತವಾಗಿ ಕರೆದೊಯ್ಯುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಾರಥಿಗಳು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗೊಂಡಿದೆ.
ಹೌದು, ಈ ವಿಚಾರ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಚಾಲಕರ ಹೃದಯ ತಪಾಸಣೆ ವೇಳೆ ಪತ್ತೆ ಆಗಿದೆ. ಬಿಎಂಟಿ ಚಾಲಕರ ಪೈಕಿ ಶೇಕಡಾ 40-50 ಪ್ರತಿಶತದಷ್ಟು ಜನರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿಯ 8,200 ಚಾಲಕರನ್ನು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ತಪಾಸಣೆ ನಡೆಸಿದೆ ಎಂದರು.
ಚಾಲಕರಲ್ಲಿ ರಕ್ತದೊತ್ತಡ ಸಮಸ್ಯೆ ಅಧಿಕ
ಬಿಎಂಟಿಸಿಯ ಎಲ್ಲ ಚಾಲಕರು ರಕ್ತ ಪರೀಕ್ಷೆಗಳು, ಹೃದಯದ ಒತ್ತಡ (ಟ್ರೆಡ್‌ಮಿಲ್) ಪರೀಕ್ಷೆಗಳು, ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್‌ಗಳೊಂದಿಗೆ (ಇಕೋ) ಸಮಗ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ತಪಾಸಣೆಗೆ ಒಳಗಾದವರಲ್ಲಿ ಶೇಕಡಾ 40ರಷ್ಟು ಮಧುಮೇಹಿಗಳು, 40 ರಷ್ಟು ಅಧಿಕದೊತ್ತಡ ಸಮಸ್ಯೆಗಳಿಂದ, 62ರಷ್ಟು ಚಾಲಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ದೃಢವಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನೂ ಹೃದಯ ಸಂಬಂಧ ತೊಂದರೆಗಳನ್ನು ಎದುರಿಸುತ್ತಿರುವ ಶೇ.5ರಷ್ಟು ಚಾಲಕರ ತಪಾಸಣೆ ಬಳಿಕ ವೈದ್ಯರಿಗೆ ಎಚ್ಚರಿಕೆ ನೀಡಿವೆ. ಸುಮಾರು 35 ಪ್ರತಿಶತ ಚಾಲಕರು ಧೂಮಪಾನಿಗಳು ಎಂಬುದು ಗೊತ್ತಾಗಿದೆ.
ಈ ಚಾಲಕರು ಅನಿಯಮಿತ ಕೆಲಸವನ್ನು ನಿರ್ವಹಿಸುತ್ತಾರೆ. ಸರಿಯಾದ ಸಮಯಕ್ಕೆ ಸಮರ್ಪಕ ಆಹಾರ ಸೇವಿಸುವುದಿಲ್ಲ. ವ್ಯಾಯಾಮದ ಕೊರತೆ ಮತ್ತು ದೂರದ ಪ್ರಯಾಣದ ಸಮಯದಲ್ಲಿ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದು, ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಅವರನ್ನು ಕಾಡುತ್ತಿವೆ ಎಂದು ಅವರು ತಿಳಿಸಿದರು.
ಒಪ್ಪಂದ KSRTC, ಪೊಲೀಸ್ ಗೂ ವಿಸ್ತರಣೆ
ಸದ್ಯ ಬಿಎಂಟಿಸಿ ಸಾರಥಿಗಳ ರಕ್ಷಣೆ ವಿಚಾರವಾಗಿ ಮಾಡಿಕೊಂಡ ಆರೋಗ್ಯ ತಪಾಸಣೆಯ ಒಪ್ಪಂದವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪ ನಡೆದಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು ಶೇಕಡಾ 30ರಷ್ಟು ಸಾವುಗಳಿಗೆ ಕಾರಣವಾಗುತ್ತಿವೆ. ಆರಂಭಿಕ ಹಂತದಲ್ಲಿ ಜನರನ್ನು ಪರೀಕ್ಷಿಸುವುದು ಮುಖ್ಯವಾಗಿರುತ್ತದೆ. ಇದರಿಂದ ಮರಣ ಪ್ರಮಾಣ ಕಡಿಮೆ ಮಾಡಬಹುದು ಎಂದು ಹೇಳಿದರು. KSRTC ಚಾಲಕರು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಒತ್ತಡದ ಕೆಲಸವನ್ನು ಹೊಂದಿರುವುದರಿಂದ ಮತ್ತು ಪ್ರತಿದಿನವೂ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅವರನ್ನು ಪರೀಕ್ಷಿಸಬೇಕಿದೆ.
ವಾಯು ಮಾಲಿನ್ಯ ಕೇವಲ ಉಸಿರಾಟದ ಸಮಸ್ಯೆಗಳಿಗೆ ಮಾತ್ರ ಕಾರಣವಲ್ಲ, ಆದರೆ 2.5 ಮಿಗ್ರಾಂಗಿಂತ ಕಡಿಮೆ ಇರುವ ಕಣಗಳು ಉಸಿರಿನಿ ಮೂಲಕ ದೇಹದೊಳಕ್ಕೆ ಸುಲಭವಾಗಿ ಶ್ವಾಸಕೋಶದ ಮೂಲಕ ಹಾದುಹೋಗುವುದರಿಂದ ಅಪಧಮನಿಗಳಿಗೆ ತೊಂದರೆ ಉಂಟು ಮಾಡುತ್ತವೆ ಎಂದು ಅವರು ವಿವರಿಸಿದರು.












Click it and Unblock the Notifications