Breaking News: ಐಟಿಪಿಎಲ್ ಟೆಕ್ಕಿಗಳಿಗೆ ಸಿಹಿಸುದ್ದಿ ಕೊಟ್ಟ ಬಿಎಂಆರ್‌ಸಿಎಲ್
ಬೆಂಗಳೂರು, ಸೆಪ್ಟೆಂಬರ್ 04: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಐಟಿಪಿಎಲ್ ಟೆಕ್ಕಿಗಳಿಗೆ ಸಿಹಿಸುದ್ದಿ ನೀಡಿದೆ. ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಐಟಿಪಿಎಲ್ ಕ್ಯಾಂಪಸ್ ವಾಕ್ ವೇ ಮೂಲಕ ನೇರ ಪ್ರವೇಶ ಕಲ್ಪಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪಾದಚಾರಿ ಮೇಲ್ಸೇತುವೆ ಮೂಲಕ ನೇರ ಪ್ರವೇಶವನ್ನು ನಿಗಮವು ನಿರ್ಮಾಣ ಮಾಡಲಿದ್ದು, ಇದಕ್ಕಾಗಿ ಐಟಿಪಿಎಲ್ ರೂ. 10 ಕೋಟಿ ನೀಡಿದೆ.
ಬಿಎಂಆರ್‌ಸಿಎಲ್ ಮತ್ತು ಮಾಹಿತಿ ತಂತ್ರಜ್ಞಾನ ಪಾರ್ಕ್ ಲಿಮಿಟೆಡ್ (ಐಟಿಪಿಎಲ್) ನಡುವೆ ವಾಕ್ ವೇ ಒದಗಿಸುವ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಪರವಾಗಿ ಕಲ್ಪನಾ ಕಟಾರಿಯಾ ಮತ್ತು ಐಟಿಪಿಎಲ್ ಪರವಾಗಿ ರವಿಭೂಷಣ ವಾಧವ್ಕರ್ ಬುಧವಾರ ಸಹಿ ಹಾಕಿದ್ದಾರೆ. ಇದು 30 ವರ್ಷಗಳ ಅವಧಿಯ ಒಪ್ಪಂದವಾಗಿದೆ.

ಪಟ್ಟಂದೂರು ಅಗ್ರಹಾರ ನಮ್ಮ ಮೆಟ್ರೋ ನಿಲ್ದಾಣದ ಕಾನ್ಕೋರ್ಸ್ ಮಟ್ಟದಿಂದ ಐಟಿಪಿಎಲ್ ಆವರಣಕ್ಕೆ ಪಾದಚಾರಿ ಮೇಲ್ಸೇಸೇತುವೆ ಮೂಲಕ ನೇರ ಪ್ರವೇಶವನ್ನು ನಿಗಮವು ನಿರ್ಮಾಣ ಮಾಡಲಿದೆ. ಇದಕ್ಕಾಗಿ ಐಟಿಪಿಎಲ್ 10 ಕೋಟಿ ರೂ. ನೀಡಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಒಪ್ಪಂದದ ವಿವರಗಳು: ಬಿಎಂಆರ್‌ಸಿಎಲ್ ಈ ಪಾದಚಾರಿ ಮೇಲ್ಸೇಸೇತುವೆಯ ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಡಲಿದ್ದು ಇದರ ವೆಚ್ಚವನ್ನು ಐಟಿಪಿಎಲ್ ಭರಿಸಲಿದೆ. ಇದು ಐಟಿಪಿಎಲ್‌ನ ಪ್ರಸ್ತುತ ಸುಮಾರು 50,000 ಉದ್ಯೋಗಿಗಳಿಗೆ ಮತ್ತು 2025ರ ವೇಳೆಗೆ ಈ ಕ್ಯಾಂಪಸ್‌ನಲ್ಲಿ ಕೆಲಸ ಮಾಡುವ ಸುಮಾರು 60,000 ಉದ್ಯೋಗಿಗಳಿಗೆ ಮೆಟ್ರೋ ನಿಲ್ದಾಣದಿಂದ ರಸ್ತೆ ದಾಟದೇ ನೇರವಾಗಿ ತಮ್ಮ ಕಛೇರಿಯನ್ನು ಪ್ರವೇಶಿಸಲು ಸಹಾಯಕವಾಗಲಿದೆ.
ನಮ್ಮ ಮೆಟ್ರೋ ರೀಚ್-1 ವಿಸ್ತರಣೆಯ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಇದು ಮೊದಲ ಒಪ್ಪಂದವಾಗಿದೆ. ಕಲ್ಪನಾ ಕಟಾರಿಯಾ ಮಾತನಾಡಿ, ಐಟಿಪಿಎಲ್ ಉದ್ಯೋಗಿಗಳಿಗೆ ಸಾರಿಗೆ ಮತ್ತು ತಡೆರಹಿತ ಸಂಪರ್ಕವನ್ನು ಉತ್ತೇಜಿಸಲು ಈ ಕೊಡುಗೆಯನ್ನು ಶ್ಲಾಘಿಸಿದರು.
ಮೆಟ್ರೋ ನಿಲ್ದಾಣಗಳ ಸಮೀಪವಿರುವ ಇತರ ಕಾರ್ಪೊರೇಟ್ ಕಂಪನಿಗಳು ಅವರ ಉದ್ಯೋಗಿಗಳ ಅನುಕೂಲಕ್ಕಾಗಿ ಮೆಟ್ರೋ ಕಾರಿಡಾರ್‌ನ ಉದ್ದಕ್ಕೂ ಮೆಟ್ರೋ ನಿಲ್ದಾಣಗಳಿಂದ ನೇರ ಸಂಪರ್ಕಕ್ಕಾಗಿ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ರವಿಭೂಷಣ ವಾಧವ್ಕರ್ ಮಾತನಾಡಿ, "ಬೆಂಗಳೂರು ಮೆಟ್ರೋ ಮಾರ್ಗವು ನಾಗರಿಕರಿಗೆ ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣವನ್ನು ನೀಡುವಲ್ಲಿ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮಹತ್ತರವಾದ ಪರಿಣಾಮವನ್ನು ಬೀರಿದೆ ಮತ್ತು ಮೆಟ್ರೋ ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರು ನಗರವು ಪ್ರಮುಖ ವಾಣಿಜ್ಯ ತಾಣ ವಾಗಲಿದೆ" ಎಂದು ಹೇಳಿದರು.
ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಐಟಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇನ್ಫೋಸಿಸ್ ಫೌಂಡೇಶನ್ ಅನುದಾನದಲ್ಲಿ ಸಹ ಈಗಾಗಲೇ ನಮ್ಮ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಸ್ಕೈವಾಕ್‌ಗಳ ನಿರ್ಮಾಣದಿಂದ ಉದ್ಯೋಗಿಗಳು ಮೆಟ್ರೋ ಇಳಿದು ಕಛೇರಿಗೆ ಬರುವ, ಕಛೇರಿಯಿಂದ ನಿಲ್ದಾಣಕ್ಕೆ ಸಂಚಾರ ನಡೆಸುವ ಸಮಯ ಉಳಿತಾಯವಾಗಲಿದೆ.












Click it and Unblock the Notifications