Bengaluru Metro: ಮೊಟ್ಟ ಮೊದಲ ಬಾರಿ ಬಿಎಂಆರ್‌ಸಿಲ್‌ಗೆ ಹಣದ ಕೊರತೆ; ಯಾವೆಲ್ಲ ಮೆಟ್ರೋ ಮಾರ್ಗಗಳಿಗೆ ಹೊಡೆತ?
BMRCL: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಇನ್ನು ಈ ತಿಂಗಳ ಆರಂಭದಲ್ಲಿ ಬಹುನಿರೀಕ್ಷಿತ ಬೆಂಗಳೂರು ಮೆಟ್ರೋ ಹಂತ-2 ಯೋಜನೆಯ ಪರಿಷ್ಕೃತ ವೆಚ್ಚದ 40,614 ಕೋಟಿ ರೂಪಾಯಿಯಲ್ಲಿ ತನ್ನ ಪಾಲಿನ ಹಣ ನೀಡಲು ರಾಜ್ಯ ಸಚಿವ ಸಂಪುಟ ವಿಫಲ ಆಗಿದೆ. ಇದೇ ಮೊಟ್ಟ ಮೊದಲ ಬಾರಿ ಬಿಎಂಆರ್‌ಸಿಎಲ್‌ಗೆ ಹಣದ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.
75.06 ಕಿಲೋ ಮೀಟರ್ ಮಾರ್ಗದ ಸುಮಾರು 10,000 ಕೋಟಿ ರೂಪಾಯಿಗಳ ವೆಚ್ಚ ಹೆಚ್ಚಳವನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಸಮಾನವಾಗಿ ಭರಿಸಬೇಕಾಗಿದೆ. ಇನ್ನು ಹೆಚ್ಚಿದ ವೆಚ್ಚಕ್ಕೆ ಹಣ ಮಂಜೂರಾತಿ ವಿಳಂಬದ ಕಾರಣ ಡಿಸೆಂಬರ್ 2026ರ ಅಂತಿಮ ಗಡುವಿನತ್ತ ಸಾಗುತ್ತಿರುವ ಹಂತ-2ರ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಹಂತ-2, ಹಂತ-1 ಮಾರ್ಗಗಳ ನಾಲ್ಕು ವಿಸ್ತರಣೆಗಳನ್ನು ಒಳಗೊಂಡಿದೆ. ಎರಡು ಹೊಸ ಮಾರ್ಗಗಳ ಹೊರತಾಗಿ, ಆರ್‌ವಿ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ-ಬೊಮ್ಮಸಂದ್ರದವರೆಗೆ 19.15 ಕಿಲೋ ಮೀಟರ್ ಹಳದಿ ಮಾರ್ಗ ಹಾಗೂ ಕಾಳೇನ ಅಗ್ರಹಾರ-ನಾಗವಾರದವರೆಗೆ 21.26-ಕಿಮೀ ಪಿಂಕ್ ಲೈನ್ ಆಗಿದೆ. ಈ ಯೋಜನೆಗಾಗಿ 2020ರ ಮೂಲ ಗಡುವನ್ನು ಈಗ ಡಿಸೆಂಬರ್ 2026ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಭೂಸ್ವಾಧೀನ ವೆಚ್ಚ, ಸಾಂಕ್ರಾಮಿಕ-ಪ್ರೇರಿತ ವಿಳಂಬ ಮತ್ತು ಅಂತಾರಾಷ್ಟ್ರೀಯ ಕರೆನ್ಸಿಗಳಲ್ಲಿನ ಏರಿಳಿತಗಳು ಮತ್ತು ಇತರ ಕಾರಣಗಳಿಂದ 30,695 ಕೋಟಿ ರೂಪಾಯಿ ಇದ್ದ ಯೋಜನೆ ವೆಚ್ಚ ಈಗ 40,600 ಕೋಟಿ ರೂಪಾಯಿಗಳಿಗೆ ಹೆಚ್ಚಳ ಆಗಿದೆ. ನಾವು ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅದರ ಅನುಮೋದನೆಗಾಗಿ ಸಲ್ಲಿಸಿದ್ದೆವು ಮತ್ತು ಹಣಕಾಸು ಇಲಾಖೆ ಅದನ್ನು ಒಪ್ಪಿದೆ. ಇನ್ನು ಮೂರು ತಿಂಗಳಲ್ಲಿ ಹಣ ಬಿಡುಗಡೆಯಾಗುವ ಬಗ್ಗೆ ವಿಶ್ವಾಸವಿತ್ತು. ಆದರೆ ಸಂಪುಟದ ಅನುಮೋದನೆ ಸಿಕ್ಕಿಲ್ಲ ಎಂದು ನಮಗೆ ಮಾಹಿತಿ ಬಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದರಿಂದ ಬಿಎಂಆರ್‌ಸಿಎಲ್‌ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಶೀಘ್ರದಲ್ಲೇ ಹಲವು ಪಾವತಿಗಳನ್ನು ಮಾಡಬೇಕಾಗಿದೆ. ಪರಿಷ್ಕೃತ ವೆಚ್ಚದಲ್ಲಿ ಕರ್ನಾಟಕವು 5,000 ಕೋಟಿ ರೂಪಾಯಿ ನೀಡಬೇಕಿದೆ ಹಾಗೂ ಕೇಂದ್ರ ಸರ್ಕಾರ ಕೂಡ 5,000ಕೋಟಿ ರೂಪಾಯಿ ಭರಿಸಬೇಕಾಗಿದೆ. ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಕೇಂದ್ರದ ಒಪ್ಪಿಗೆ ಪಡೆಯಬಹುದೆಂದು ಅವರು ಹೇಳಿದ್ದಾರೆ.
ಪರಿಷ್ಕೃತ ವೆಚ್ಚದ ಬಗ್ಗೆ ಹೆಚ್ಚುವರಿ ವಿವರಗಳನ್ನು ಕೇಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ಡಿಸೆಂಬರ್ 6ರಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ನಂತರ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದರು.












Click it and Unblock the Notifications