Namma Metro: ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲಿಗೆ ಬಂದಿದೆ AI ತಂತ್ರಜ್ಞಾನ, ಹೊಸ ವ್ಯವಸ್ಥೆ
ಬೆಂಗಳೂರು, ಮೇ 08: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಯಾಣಿಕರಿಗೆ ಉಪಯೋಗವಾಗುವ ಉಪಕ್ರಮಗಳು, ವ್ಯವಸ್ಥೆ ಜಾರಿಗೆ ತರುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೆಟ್ರೋ ನಿಲ್ದಾಣಗಳಲ್ಲಿ ಹೊಸ ಹೊಸ ವ್ಯವಸ್ಥೆ ಅಳವಡಿಕೆ ಮುಂದಾಗಿದೆ. ಇದೀಗ ನೇರಳೆ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲಿಗೆ ಎಐ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೌದು, ನಮ್ಮ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆಯ ನಡುವಿನ 06 ಮೆಟ್ರೋ ನಿಲ್ದಾಣಗಳಲ್ಲಿ ಸುಧಾರಿತ CCTV ವ್ಯವಸ್ಥೆ ಅಳವಡಿಸಿದೆ. ಇದು ನಿಲ್ದಾಣದ ಒಳಗಿನ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳನ್ನೂ ಗಮನಿಸುತ್ತಿದ್ದು, ಕೃತಕಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗುತ್ತದೆ ಎಂದು BMRCL ತಿಳಿಸಿದೆ.

ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲು, ನಿಗಾ ವ್ಯವಸ್ಥೆಯನ್ನು ಮೇ 6 ರಂದು ಪ್ರಾರಂಭಿಸಲಾಗಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು "ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್" (ANPR) ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. AI ಆಧಾರಿತ ವಿಡಿಯೋ ವಿಶ್ಲೇಷಣೆಯೊಂದಿಗೆ, ಈ ತಂತ್ರಜ್ಞಾನ ಅನುಮಾನಾಸ್ಪದ ಚಟುವಟಿಕೆಗಳು, ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ ಎಂದು ಮೆಟ್ರೋ ಅಧಿಕಾರಿಗಳು ವ್ಯವಸ್ಥೆ ನಿರ್ವಹಿಸಿದ ಅನುಭವ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್ ಅವರು ಈ ಕುರಿತು ಪ್ರತಿಕ್ರಿಯಿಸಿದರು. ನಮ್ಮ ಮೆಟ್ರೋ ಪ್ರಯಾಣಿಕರ ಭದ್ರತೆ ಬಿ.ಎಂ.ಆರ್.ಸಿ.ಎಲ್ ನ ಪ್ರಮುಖ ಆದ್ಯತೆಯಾಗಿದೆ. ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸೋದರ ಮೂಲಕ ಭದ್ರತೆಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ಈ ಹೊಸ ಎಐ ಮತ್ತು ANPR ತಂತ್ರಜ್ಞಾನ ನಮಗೆ ನಿಲ್ದಾಣದ ನಿರಂತರ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಮತ್ತು ತಕ್ಷಣ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲಿದೆ. ಸಾರ್ವಜನಿಕ ಸುರಕ್ಷತೆ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.
ಹೊಸ ವ್ಯವಸ್ಥೆ: 30 ಸೆಕೆಂಡ್‌ನಲ್ಲಿ ಟಿಕೆಟ್ ಪಡೆಯಿರಿ
ಬೆಂಗಳೂರು ನಮ್ಮ ಮೆಟ್ರೋ ಬೈಯಪ್ಪನಹಳಿ ಮೆಟ್ರೋ ನಿಲ್ದಾಣದಲ್ಲಿ 10 ಹೊಸ ಸ್ವಯಂ ಸೇವಾ ಟಿಕೆಟ್ ವಿತರಣೆ ಯಂತ್ರ ಅಳವಡಿಸಲಾಗಿದೆ. ಇವು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಯಾಗಿದೆ. ಮಷಿನ್‌ಗಳಲ್ಲಿ ನೀವು ಸ್ವಯಂ ಆಗಿ ಮೊತ್ತ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ. ಸದ್ಯ ಈ ಯಂತ್ರಗಳನ್ನು ಬೈಯಪ್ಪನಹಳ್ಳಿಯಲ್ಲಿ ಮಾತ್ರವೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಮೆಟ್ರೋ ನಿಲ್ದಾಣಗಳಲ್ಲೂ ಸಹ ಈ ಟಿಕೆಟ್ ವಿತರಣೆ ಯಂತ್ರ ಅಳವಡಿಕೆ ಆಗಲಿವೆ.
ಸದ್ಯ ನಮ್ಮ ಮೆಟ್ರೋ 76 ಕಿಲೋ ಮೀಟರ್ ನೆಟ್‌ವರ್ಕ್ ಹೊಂದಿದೆ. ನೇರಳೆ ಮಾರ್ಗ, ಹಸಿರು ಮಾರ್ಗದಲ್ಲಿ ಸುಮಾರು 55ಕ್ಕೂ ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ನೀಲಿ ಮಾರ್ಗ ಹಾಗೂ ಗುಲಾಬಿ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದೆ. ಮೆಟ್ರೋ ಹಳದಿ ಮಾರ್ಗವು ಇನ್ನೇನು ಕೆಲವೇ ತಿಂಗಳುಳಲ್ಲಿ ತೆರೆಯುವ ಸಾಧ್ಯತೆ ಇದೆ. ಈ ಮಧ್ಯೆ ಹಾಲಿ ಕಾರ್ಯಾಚರಣೆ ಇರುವ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.












Click it and Unblock the Notifications